ಉಡುಪಿ ಜಿಲ್ಲೆಯಲ್ಲಿ 3 ಮಂಗಗಳ ಶವ ಪತ್ತೆ
ಉಡುಪಿ, ಫೆ.27: ಉಡುಪಿ ಜಿಲ್ಲೆಯಲ್ಲಿ ಇಂದು ಮೂರು ಮಂಗಗಳ ಶವ ಪತ್ತೆಯಾಗಿದ್ದು, ಇವುಗಳಲ್ಲಿ ಕರ್ಜೆಯ ಸಂತೆಕಟ್ಟೆ ಎಂಬಲ್ಲಿ ಪತ್ತೆಯಾದ ಮಂಗದ ಪೋಸ್ಟ್‌ಮಾರ್ಟಂ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಕಾರ್ಕಳದ ಹೆಬ್ರಿ ಮತ್ತು ದೊಂಡರಂಗಡಿಗಳಲ್ಲಿ ಪತ್ತೆಯಾದ ಕಳೇಬರ ಸಂಪೂರ್ಣ ಕೊಳೆತುಹೋಗಿವೆ ಎಂದು ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಮನುಷ್ಯನಲ್ಲಿ ಶಂಕಿತ ಮಂಗನಕಾಯಿಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲ. ಈವರೆಗೆ ರಕ್ತ ಪರೀಕ್ಷೆ ನಡೆಸಿದ 50 ಮಂದಿಯಲ್ಲೂ ಸೋಂಕು ಪತ್ತೆಯಾಗಿಲ್ಲ. ಬುದವಾರ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರು 2023 ಮನೆಗಳಿಗೆ ಭೇಟಿ ನೀಡಿ ಜ್ವರದ ಸಮೀಕ್ಷೆ ನಡೆಸಿದ್ದಾರೆ ಎಂದವರು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ 216 ಮಂದಿಈವರೆಗೆ ಮಣಿಪಾಲ ಕೆಎಂಸಿಗೆ ಶಂಕಿತ ಮಂಗನಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದು, 11 ಮಂದಿ ಜ್ವರ ಮರುಕಳಿಹಿಸಿದ್ದರಿಂದ ಮತ್ತೆ ದಾಖಲಾಗಿದ್ದಾರೆ ಎಂದು ಕೆಎಸಿ ಪ್ರಕಟಣೆ ತಿಳಿಸಿದೆ.
ಇವರಲ್ಲಿ 86 ಮಂದಿಯಲ್ಲಿ ಮಂಗನಕಾಯಿಲೆ ಸೋಂಕು ಪತ್ತೆಯಾಗಿ ಚಿಕಿತ್ಸೆ ಪಡೆದಿದ್ದಾರೆ. 141ಮಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ. ಒಟ್ಟು 203 ಮಂದಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 20 ಮಂದಿ ಈಗ ಚಿಕಿತ್ಸೆ ಪಡೆಯುತಿದ್ದಾರೆ. ಮಂಗನಕಾಯಿಲೆ ಸೋಂಕು ಇದ್ದ ಉತ್ತರ ಕನ್ನಡದ ನಾಲ್ವರು ರೋಗಿಗಳೂ ಕೆಎಂಸಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಕೆಎಂಸಿಯ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.