ಕಡಿಯಾಳಿ ದೇವಸ್ಥಾನ: ಮಾ.2ಕ್ಕೆ ಮುಷ್ಠಿ ಕಾಣಿಕೆ ಸಮರ್ಪಣೆ
ಉಡುಪಿ, ಫೆ.27: ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಗೆ ಒಳಪ ಟ್ಟಿರುವ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಿದ್ಧತೆ ನಡೆಸಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಾ.2ರಂದು ಬೆಳಗ್ಗೆ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಶ್ರೀನಿವಾಸ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ವ್ಯವಸ್ಥಾಪನ ಸಮಿತಿ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇದೀಗ ಸುಮಾರು 11 ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದಕ್ಕೆ ಮೊದಲು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಾ.2ರ ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಶ್ರೀಶ ಉಪಾಧ್ಯ, ಸದಸ್ಯ ಕೆ.ಭೋಜ ಸೇರಿಗಾರ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಡಾ.ವಿಜಯೇಂದ್ರ ಭಟ್ ಉಪಸ್ಥಿತರಿದ್ದರು.