×
Ad

ಜಿಲ್ಲಾ ಬೀಡಿ ಕಾರ್ಮಿಕರಿಂದ ಮುಖ್ಯಮಂತ್ರಿಗೆ ಮನವಿ

Update: 2019-02-27 21:54 IST

ಉಡುಪಿ, ಫೆ.27: ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ನಿಗದಿ ಪಡಿಸಿದ ಕನಿಷ್ಠ ಕೂಲಿ ಹಾಗೂ ತುಟ್ಟಿಭತ್ಯೆಯನ್ನು ಮಾಲಕರು ಬಹುಕಾಲದಿಂದ ನೀಡದೇ ಬಾಕಿ ಇರಿಸಿಕೊಂಡಿದ್ದು, ಈ ಬಗ್ಗೆ ಹಲವುಬಾರಿ ಮನವಿ ಮಾಡಿಕೊಂಡರೂ, ಹಲವು ಹೋರಾಟವನ್ನು ಹಮ್ಮಿಕೊಂಡರೂ ಕನಿಷ್ಠ ಕೂಲಿ ಹಾಗೂ ಬಾಕಿ ಮೊತ್ತವನ್ನು ನೀಡದೇ ಕಾರ್ಮಿಕರನ್ನು ಸಂಕಷ್ಟಕ್ಕೆ ಗುರಿ ಮಾಡಿದ್ದಾರೆ ಎಂದು ಜಿಲ್ಲೆಯ ಬೀಡಿ ಕಾರ್ಮಿಕರ ಪರವಾಗಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಬೀಡಿ ಮಾಲಕರು ಕಾರ್ಮಿಕರ ಬಾಕಿ ಪಾವತಿಯನ್ನು ಕೂಡಲೇ ನೀಡುವಂತೆ ಕಾರ್ಮಿಕ ಇಲಾಖೆಯಮೂಲಕ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದ ಮನವಿಯಲ್ಲಿ ವಿನಂತಿಸಲಾಗಿದೆ.

ಅಲ್ಲದೇ ಕಳೆದ ಜ.18ರಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್‌ನ ಕೇಂದ್ರ ಸಮಿತಿಯ ಸಭೆಯಲ್ಲೂ ಕೇಂದ್ರ ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇರಿಸಲಾಗಿದ್ದು, ಅವುಗಳ ಕುರಿತೂ ಫೆಡರೇಷನ್ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದೂ ಮನವಿಯಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲಾ ಫೆಡರೇಷನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಿದ ನಿಯೋಗದಲ್ಲಿ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕೆ.ಲಕ್ಷ್ಮಣ್, ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ, ಬಲ್ಕೀಸ್ ಬಾನು, ಸುಂದರಿ, ಸುಗಂಧಿ ಹಾಗೂ ವಿಠಲ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News