ಮಾ. 2: ಉಪ್ಪಿನಂಗಡಿಯಲ್ಲಿ 34ನೇ ವರ್ಷದ `ವಿಜಯ ವಿಕ್ರಮ' ಜೋಡುಕರೆ ಕಂಬಳ
ಪುತ್ತೂರು, ಫೆ. 27: ಉಪ್ಪಿನಂಗಡಿ ನೇತ್ರಾವತಿ ನದಿಯ ಕಿನಾರೆಯ ಕೂಟೇಲು ಎಂಬಲ್ಲಿ ಮಾ.2ರಂದು 34ನೇ ವರ್ಷದ ಹೊನಲು ಬೆಳಕಿನ `ವಿಜಯ ವಿಕ್ರಮ' ಜೋಡುಕರೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿ ಅದ್ಯಕ್ಷ ಅಶೋಕ್ ರೈ ಕೋಡಿಂಬಾಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಬಳ ಕೂಟವನ್ನು ಬೆಳಗ್ಗೆ ಪುತ್ತೂರು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಜನಾರ್ಧನ ರೆಡ್ಡಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮತ್ತಿತರರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಾ.3ರಂದು ಬೆಳಗ್ಗೆ ಕಂಬಳದ ಸಮಾರೋಪ ಸಮಾರಂಭ ನಡೆಯಲಿದೆ. ಕಂಬಳದಲ್ಲಿ ತುಳು ಸಿನಿಮಾವೊಂದರ ಚಿತ್ರೀಕರಣವೂ ನಡೆಯಲಿದೆ. ಕಂಬಳದಲ್ಲಿ 6 ವಿಭಾಗಗಳಲ್ಲಿ ಕೋಣಗಳು ಸ್ಪರ್ಧೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಹಿರಿಯ ಕಂಬಳ ಕೋಣದ ಯಜಮಾನ ಇರುವೈಲು ಪಾನಿಲ ಬಾಡ ಪೂಜಾರಿ, ಕೋಣಗಳನ್ನು ಬಿಡಿಸುವ ವಲೇರಿಯನ್ ಡೇಸಾ ಅಲ್ಲಿಪಾದೆ ಮತ್ತು ಪ್ರಧಾನ ಮಂತ್ರಿ ಬಾಲ್ ಶಕ್ತಿ ಪುರಸ್ಕಾರ್ ವಿಜೇತ ವಿದ್ಯಾರ್ಥಿ ಎ,ಯು.ನಚಿಕೇತ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾದ್ಯಕ್ಷ ಎನ್.ಉಮೇಶ್ ಶೆಣೈ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು, ಪ್ರಚಾರ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.