ಬಂಟ್ವಾಳ : ವಿವಿಧ ಕಾಮಗಾರಿಗಳ ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ
ಬಂಟ್ವಾಳ, ಫೆ. 27: ಮೂಡುಬಿದಿರೆ-ಬಂಟ್ವಾಳ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಭಾರತ್ ಮಾಲಾ ಯೋಜನೆಯಡಿ 459 ಕೋಟಿ ರೂ. ಮಂಜೂರುಗೊಂಡಿದ್ದು, ಶೀಘ್ರದಲ್ಲಿಯೇ ಇದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಬುಧವಾರ ಬಂಟ್ವಾಳ ತಾಲೂಕಿನ ರಾಯಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜನಧನ್, ಆಯುಷ್ಮಾನ್ ಭಾರತ, ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಹಿತ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹೇಡಿಯಂತೆ ಹತ್ಯೆಗೈದಿರುವುದಕ್ಕೆ ಪ್ರತಿಯಾಗಿ ಉಗ್ರರ ನೆಲೆಯನ್ನು ಮಿರಾಜ್ ಮೂಲಕ ಧ್ವಂಸಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದಿದ್ದಾರೆ. ಮೋದಿ ಹಾಗೂ ಭಾರತದ ಯೋಧರಿಂದ ದೇಶ ಸುರಕ್ಷಿತವಾಗಿದೆ ಎಂಬುವುದು ಸಾಬೀತಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶವನ್ನು ಹೊಗೆ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಎರಡನೆ ಹಂತದಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲಾ ಗ್ಯಾಸ್ ಯೋಜನೆಯಡಿ ಅಡುಗೆ ಅನಿಲವನ್ನು ವಿತರಿಸಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕರಿಸದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷ ದಯಾನಂದ ಸಫಲ್ಯ, ಉಪಾಧ್ಯಕ್ಷೆ ಪುಷ್ಪಲತಾ ಎಸ್., ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಪ್ರಮುಖರಾದ ದೇವದಾಸ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್ ಪರಮೇಶ್ವರ ರಾಯಿ, ರಶ್ಮಿತ್ ಶೆಟ್ಟಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಗ್ರಾಪಂ ಸದಸ್ಯರಾದ ಹರೀಶ್ ಆಚಾರ್ಯ, ರಾಘವ ಅಮೀನ್, ಕುಸುಮಾ, ಕಂದಾಯ ನಿರೀಕ್ಷಕ ನವೀನ್ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರ ನಿಧಿಯ 5 ಲಕ್ಷ ರೂ. ವೆಚ್ಚದಲ್ಲಿ ಕೊಯಿಲ ಪಾಂಡವರಗುಡ್ಡೆ ಕಾಂಕ್ರೀಟ್ ರಸ್ತೆ, ಜಿಪಂ ಹಾಗೂ ಉದ್ಯೋಗ ಖಾತರಿ ಯೋಜನೆ ಒಟ್ಟು 13. 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಾಯಿ-ದಡ್ಡು ರಸ್ತೆಯನ್ನು ಉದ್ಘಾಟಿಸಲಾಯಿತು.
ರಾಯಿ-ಬಜೆರೋಡಿ ರಸ್ತೆಯನ್ನು 5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಶಿಲಾನ್ಯಾಸವನ್ನು ನೆರವೇರಿಸಲಾಯಿತು. ಇದೇ ವೇಳೆ ಪ್ರಧಾನ ಮಂತ್ರಿ ಉಜ್ವಲಾ ಗ್ಯಾಸ್ ಯೋಜನೆಯಡಿ ಸುಮಾರು 70 ಮಂದಿ ಫಲಾನುಭವಿಗಳಿಗೆ ಅಡುಗೆ ಅನಿಲ ಸವಲತ್ತನ್ನು ಹಾಗೂ 94ಸಿ ಮತ್ತು ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಪ್ರಭಾರ ಕಾರ್ಯದರ್ಶಿ ಶರೀಫ್ ಸ್ವಾಗತಿಸಿ, ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.