ರಾಜೀವ್ ಕುಮಾರ್ ಕಾಲ್ ರೆಕಾರ್ಡ್ ತಿರುಚಿರುವುದನ್ನು ಸಾಬೀತುಪಡಿಸಲು ಅಫಿದಾವಿತ್ ಸಲ್ಲಿಸಿ
ಹೊಸದಿಲ್ಲಿ, ಫೆ. 27: ಶಾರದಾ ಚಿಟ್ ಫಂಡ್ ಹಗರಣದ ಆರೋಪಿಯ ಕಾಲ್ ರೆಕಾರ್ಡ್ ಅನ್ನು ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತಿರುಚಿದ್ದಾರೆ ಎಂಬ ಸಿಬಿಐ ಪ್ರತಿಪಾದನೆಗೆ ಆಧಾರವಾಗಿ ಎರಡು ವಾರಗಳ ಒಳಗೆ ಅಫಿದಾವಿತ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸಿಬಿಐ ನಿರ್ದೇಶಕರಿಗೆ ಆದೇಶಿಸಿದೆ.
ಈ ಪ್ರಕರಣದ ನ್ಯಾಯಾಂಗ ನಿಂದನೆ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾ. 26ಕ್ಕೆ ಮುಂದೂಡಿದೆ.
ಶಾರದಾ ಚಿಟ್ ಫಂಡ್ ಹಗರಣದ ತನಿಖೆ ನಡೆಸುತ್ತಿರುವ ರಾಜ್ಯ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ನೇತೃತ್ವ ವಹಿಸಿದ್ದ ರಾಜೀವ್ ಕುಮಾರ್ ಅವರು ಕಾಲ್ ರೆಕಾರ್ಡ್‌ಗಳನ್ನು ತಿರುಚಿರುವುದಕ್ಕೆ ಆಧಾರವಾದ ಮಾಹಿತಿಯನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠ ಸಿಬಿಐ ನಿರ್ದೇಶಕ ರಿಶಿ ಕುಮಾರ್ ಶುಕ್ಲಾ ಅವರಿಗೆ ಸೂಚಿಸಿದೆ.
ಸಿಬಿಐ ಮಾಡಿದ ಆರೋಪ ಗಂಭೀರವಾದುದು ಎಂದು ಹೇಳಿದೆ ಸುಪ್ರೀಂ ಕೋರ್ಟ್, ಕುಮಾರ್ ಅವರ ನ್ಯಾಯಾಂಗ ನಿಂದನೆಯ ಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಸಿಬಿಐಗೆ ತಿಳಿಸಿದೆ.
ಶಾರದಾ ಚಿಟ್ ಫಂಡ್ ತನಿಖೆಯಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಸಿಬಿಐ ಫೆ. 4ರಂದು ರಾಜೀವ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಸಿಬಿಐ ಕುಮಾರ್ ಅವರನ್ನು ಶಿಲ್ಲಾಂಗ್‌ನಲ್ಲಿ ನಿರಂತರ ಐದು ದಿನಗಳ ಕಾಲ ವಿಚಾರಣೆ ನಡೆಸಿತ್ತು.