ಅರಣ್ಯ ನಿವಾಸಿಗಳ ಒಕ್ಕಲೆಬ್ಬಿಸುವಿಕೆ: ಆದೇಶಕ್ಕೆ ತಡೆ ಕೋರಿದ ಕೇಂದ್ರದ ಅರ್ಜಿ ನಾಳೆ ವಿಚಾರಣೆ

Update: 2019-02-27 17:28 GMT

ಹೊಸದಿಲ್ಲಿ, ಫೆ.27: 16 ರಾಜ್ಯಗಳ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಸುಮಾರು 10 ಲಕ್ಷ ಆದಿವಾಸಿ ಹಾಗೂ ಅರಣ್ಯ ನಿವಾಸಿಗಳ ಒಕ್ಕಲೆಬ್ಬಿಸುವ ಆದೇಶಕ್ಕೆ ತಡೆ ಕೋರಿ ಕೇಂದ್ರ ಸರಕಾರ ಹಾಗೂ ಗುಜರಾತ್ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆ.28(ಗುರುವಾರ)ರಂದು ನಡೆಸಲಿದೆ.

ಅರಣ್ಯ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಫೆ.13ರಂದು ನಡೆಸಿದ್ದ ಸುಪ್ರೀಂಕೋರ್ಟ್, ಹೊಸ ಕಾನೂನಿನ ಅನುಗುಣವಾಗಿ ತಾವು ಪಾರಂಪರಿಕ ಅರಣ್ಯ ನಿವಾಸಿಗಳೆಂದು ಸಾಬೀತುಪಡಿಸಲು ವಿಫಲವಾಗಿರುವವರನ್ನು ಒಕ್ಕಲೆಬ್ಬಿಸುವಂತೆ ಸೂಚಿಸಿತ್ತು.

ಇದರಂತೆ ಮಧ್ಯಪ್ರದೇಶದಲ್ಲಿ ಸುಮಾರು 3.5 ಲಕ್ಷ , ಒಡಿಶಾದಲ್ಲಿ 1.5 ಲಕ್ಷ ಆದಿವಾಸಿಗಳ ಹಕ್ಕು ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಹಕ್ಕು ಕೋರಿಕೆ ತಿರಸ್ಕೃತವಾಗಿರುವ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದ ಸುಪ್ರೀಂಕೋರ್ಟ್, ಈ ಆದೇಶವನ್ನು ಜಾರಿಗೊಳಿಸದಿದ್ದರೆ ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿತ್ತು.

ಸುಪ್ರೀಂಕೋರ್ಟ್‌ನ ಆದೇಶವನ್ನು ಪರಿಶೀಲಿಸುವ ಅರ್ಜಿಯನ್ನು ದಾಖಲಿಸುವಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಾದ ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆ.23ರಂದು ಸೂಚಿಸಿದ್ದರು. ಫೆ.25ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇದೇ ರೀತಿಯ ಸೂಚನೆಯನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News