ಪ.ಬಂಗಾಳ ಸರಕಾರದಿಂದ ಪಾಕಿಸ್ತಾನದ ಕೈದಿಗಳನ್ನು ಅತ್ಯುಚ್ಛ ಭದ್ರತೆಯ ಕಾರಾಗೃಹಕ್ಕೆ ವರ್ಗಾವಣೆ

Update: 2019-02-27 17:33 GMT

ಕೋಲ್ಕತಾ, ಫೆ. 27: ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಎರಡು ಕರೆಕ್ಷನ್ ಹೋಮ್‌ಗಳಲ್ಲಿ ಇರಿಸಲಾಗಿದ್ದ ಪಾಕಿಸ್ತಾನದ 14 ಮಂದಿ ಕೈದಿಗಳನ್ನು ಪಶ್ಚಿಮಬಂಗಾಳ ಸರಕಾರ ಅತ್ಯುಚ್ಛ ಭದ್ರತೆಯ ಕಾರಾಗೃಹಕ್ಕೆ ವರ್ಗಾಯಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಜೈಪುರ ಕಾರಾಗೃಹದಲ್ಲಿ 50 ವರ್ಷದ ಪಾಕಿಸ್ತಾನಿ ಕೈದಿಯನ್ನು ಸಹ ಕೈದಿ ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ‘‘ರಾಜಸ್ಥಾನದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕೈದಿಗಳನ್ನು ಇತರ ಕೈದಿಗಳಿಂದ ಪ್ರತ್ಯೇಕಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಅವರನ್ನು ಅತ್ಯುಚ್ಛ ಭದ್ರತೆಯ ಜೈಲಿಗೆ ವರ್ಗಾಯಿಸಲಾಗಿದೆ.’’ ಎಂದು ಅವರು ತಿಳಿಸಿದ್ದಾರೆ.

14 ಮಂದಿ ಪಾಕಿಸ್ತಾನಿ ಕೈದಿಗಳಿಗೆ ಮೂರು ಪದರದ ಭದ್ರತೆ ನೀಡಲಾಗಿದೆ. ಈ ಎಲ್ಲ ಕೈದಿಗಳು ಇತರ ಕೈದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ನಾವು ತೊಂದರೆ ಎದುರಿಸಲು ಸಿದ್ಧರಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ 14 ಮಂದಿ ಕೈದಿಗಳಲ್ಲಿ ನಾಲ್ವರನ್ನು ನಗರದಲ್ಲಿರುವ ಪ್ರೆಸಿಡೆನ್ಸಿ ಕರೆಕ್ಷನ್ ಹೋಮ್ ಹಾಗೂ ಇತರ 10 ಮಂದಿಯನ್ನು ಡಮ್ ಡಮ್ ಸೆಂಟ್ರಲ್ ಕರೆಕ್ಷನ್ ಹೋಮ್‌ನಲ್ಲಿ ಇರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News