ಅರಣ್ಯ ಅತಿಕ್ರಮಣದಾರರನ್ನು ರಕ್ಷಿಸಲು ಸುಪ್ರೀಮ್‍ ಕೋರ್ಟ್ ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಯಾಗಲಿ: ರಾಮಾಮೋಗೇರ್

Update: 2019-02-27 17:37 GMT

ಭಟ್ಕಳ: 2006ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಸುಪ್ರೀಮ್‍ ಕೋರ್ಟ್‍ ತೀರ್ಪು ಹೊರಬಿದ್ದಿದ್ದು, ಅರಣ್ಯ ಅತಿಕ್ರಮಣ ದಾರರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತಾಗಿ ಸುಪ್ರೀಮ್‍ ಕೋರ್ಟನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಭಟ್ಕಳ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದರು.

ಅವರು ಮಂಗಳವಾರ ಇಲ್ಲಿನ ಸತ್ಕಾರ್ ಹೊಟೆಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಅರಣ್ಯ ಅತಿಕ್ರಮಣದ ವಿರುದ್ಧ ಸರಕಾರೇತರ ಸಂಸ್ಥೆಯೊಂದು ಸುಪ್ರೀಮ್‍ ಕೋರ್ಟನಲ್ಲಿ ಸಲ್ಲಿಸಿರುವ ದಾವೆ ಮಾನವೀಯ ಮುಖವಿಲ್ಲದ್ದಾಗಿದೆ. ಇದನ್ನು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಡಲು ಸರಕಾರಗಳು ವಿಫಲವಾಗಿವೆ. ಭಟ್ಕಳದಲ್ಲಿ 10 ಸಾವಿರ ಅರಣ್ಯ ಅತಿಕ್ರಮಣದಾರರು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾಡಳಿತ 6000 ಅರ್ಜಿಗಳನ್ನು ತಿರಸ್ಕರಿಸಿದೆ. ಉತ್ತರ ಕನ್ನಡದಲ್ಲಿ 80% ಅರಣ್ಯ ಭೂಮಿ ಇದ್ದು ಜನರಿಗೆ ಉಳಿದುಕೊಳ್ಳಲು ಬೇರೆ ನೆಲೆ ಇಲ್ಲದಾಗಿದೆ. ಇಂತಹ ಸನ್ನಿವೇಶದಲ್ಲಿ ಹೋರಾಟವೊಂದೇ ಬಾಕಿ ಉಳಿದಿದ್ದು, ಮಾ. 2ರಂದು ಕುಮಟಾದಲ್ಲಿ ನಡೆಯುವ ಜೈಲ್ ಭರೋ ಚಳುವಳಿಯಲ್ಲಿ ಭಟ್ಕಳ ತಾಲೂಕಿನ ಅತಿಕ್ರಮಣದಾರ ಕುಟುಂಬದ ಸದಸ್ಯರು ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಂಡರು.

ಅತಿಕ್ರಣದಾರರ ಹಿತರಕ್ಷಣೆಗಾಗಿ ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೈಕೋರ್ಟನಲ್ಲಿ ದಾವೆ ಸಲ್ಲಿಸಿದ್ದಾರೆ. ಅಲ್ಲದೇ ಅರಣ್ಯ ಅತಿಕ್ರಮಣದಾರರ ರಕ್ಷಣೆಗಾಗಿ ಮೇಲ್ಮನವಿ ಸಲ್ಲಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿಯವರು ರಾಜ್ಯ ಉಪಮುಖ್ಯ ಮಂತ್ರಿ ಜಿ. ಪರಮೇಶ್ವರರವರಿಗೆ ಪತ್ರ ಮುಖೇನ ತಿಳಿಸಿದ್ದು, ಈ ನಿರ್ಧಾರಕ್ಕಾಗಿ ಕಾಂಗ್ರೆಸ್‍ ಅಧ್ಯಕ್ಷರನ್ನುಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ವತಿಯಿಂದ ಅಭಿನಂದಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಎಮ್.ಡಿ.ನಾಯ್ಕ, ಗಣಪತಿ ನಾಯ್ಕಜಾಲಿ, ಸಲಾವುದ್ದೀನ್, ರಿಝ್ವಾನ್, ಸುಲೈಮಾನ್, ದೇವರಾಜಗೊಂಡ, ಮಾದೇವ ನಾಯ್ಕ, ಸುಬ್ರಾಯ ನಾಯ್ಕ ಬೆಟ್ಕೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News