×
Ad

ಶಿಕ್ಷಕ ಸಮೂಹದಿಂದ ಕ್ಯಾನ್ಸರ್ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿ: ಸುದೇಶ್ ಕುಮಾರ್

Update: 2019-02-28 19:15 IST

ಬಂಟ್ವಾಳ, ಫೆ. 28: ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಶಿಕ್ಷಕ ಸಮೂಹದಿಂದ ನಡೆದರೆ ಹೆಚ್ಚು ಪರಿಣಾಮಕಾರಿ ಆಗಬಲ್ಲುದು ಎಂದು ಕರ್ನಾಟಕ ಪತ್ರಕರ್ತರ ಸಂಘದ ದ.ಕ. ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಹೇಳಿದ್ದಾರೆ. 

ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡು-ಕೈಕುಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಇಂದು ಎಲ್ಲ ರೀತಿಯ ಚಿಕಿತ್ಸೆಗಳಿದ್ದು, ಸೂಕ್ತ ವ್ಯವಸ್ಥೆಗಳನ್ನು ಸರಕಾರ ಕೂಡಾ ಮಾಡುತ್ತಿದೆ. ಇದನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗಬೇಕು ಎಂದರು. 

ಎನ್‍ಪಿಸಿಡಿಸಿಎಸ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ. ಸುಷ್ಮಾ ಅಡಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ, ತಂಬಾಕು ಸಹಿತ ಅಮಲು ಪದಾರ್ಥಗಳು ಹಾಗೂ ಆರೋಗ್ಯಕ್ಕೆ ಹಾನಿಕರವಾಗಿರುವ ಜಂಕ್ ಫುಡ್‍ಗಳಿಂದ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಡರೆ ಮಕ್ಕಳನ್ನು ಕ್ಯಾನ್ಸರ್‍ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸಬಹುದು ಎಂದರಲ್ಲದೆ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಇದುವೇ ಆರೋಗ್ಯಯುಕ್ತ ಸಮಾಜ ನಿರ್ಮಾಣದ ಮೊದಲ ಮೆಟ್ಟಿಲು ಎಂದರು.

ಇದೇ ವೇಳೆ ಕ್ಯಾನ್ಸರ್ ರೋಗದ ಲಕ್ಷಣಗಳು, ರೋಗವನ್ನು ಪತ್ತೆ ಹಚ್ಚುವ ವಿಧಾನ ಹಾಗೂ ತಡೆಗಟ್ಟುವ ಮುಂಜಾಗೃತಾ ಕ್ರಮಗಳನ್ನು ಡಾ. ಅಡಪ ವಿವರಿಸಿ, ಈ ಬಗ್ಗೆ ಶಿಕ್ಷಕರೊಂದಿಗೆ ಮುಕ್ತ ಸಂವಾದ ನಡೆಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಮಾತನಾಡಿ, ಶಿಕ್ಷಕರ ಸಂಘಟನೆ ಎಂಬುದು ಅತ್ಯಂತ ಬಲಾಢ್ಯ ಹಾಗೂ ಪರಿಣಾಮಕಾರಿ ಸಂಘಟನೆಯಾಗಿದ್ದು, ಜಾಗೃತಿ ಕಾರ್ಯಕ್ರಮಗಳು ಪ್ರಭಾವಯುತವಾಗಿ ಸಮಾಜಕ್ಕೆ ತಲುಪಲು ಶಿಕ್ಷಕ ಸಮುದಾಯದಿಂದ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಕ್ತವಾಗಿ ಸಂವಾದ ನಡೆಸಿದ ಶಿಕ್ಷಕರು ಇವತ್ತು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಆಸುಪಾಸಿನಲ್ಲಿ ಗಾಂಜಾ ಸಹಿತ ವಿವಿಧ ಅಮಲು ಪದಾರ್ಥಗಳ ಮಾರಾಟ ಹಾಗೂ ಪೂರೈಕೆ ನಿರಾತಂಕವಾಗಿ ನಡೆಯುತ್ತಿದ್ದು, ಇದು ವಿದ್ಯಾರ್ಥಿಗಳ ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಿದರೆ ಅದಕ್ಕೂ ರಾಜಕೀಯ ಕಾರಣಗಳು ಅಡ್ಡಿಯಾಗಿ ಶಿಕ್ಷಕರ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪತ್ರಕರ್ತರು ಹಾಗೂ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಅವರು ಶುಭ ಹಾರೈಸಿದರು. 

ಪತ್ರಕರ್ತರಾದ ಯು. ಮುಸ್ತಫಾ, ಲತೀಫ್ ನೇರಳಕಟ್ಟೆ, ಸತೀಶ್ ಕಾರ್ತಿಕ್, ಅಬ್ದುಲ್ ರಹಿಮಾನ್ ತಲಪಾಡಿ ಮೊದಲಾದವರು ಭಾಗಹಿಸಿದ್ದರು.
ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಸಮಿತಿಯ ಸದಸ್ಯ ಜಯಾನಂದ ಪೆರಾಜೆ ಸ್ವಾಗತಿಸಿ,  ಅಳಿಕೆ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲ ರಘು ಟಿ.ವೈ. ವಂದಿಸಿದರು. ಸಂಘದ ಅಧ್ಯಕ್ಷ ಫಾರೂಕ್ ಬಂಟ್ವಾಳ ಪ್ರಸ್ತಾವಿಸಿದರು. ಉಪಾಧ್ಯಕ್ಷ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News