ಬಾಲಕೋಟ್ ಉಗ್ರರ ವಿರುದ್ಧದ ದಾಳಿ : ಅಂತರ್ ರಾಷ್ಟ್ರೀಯ ಮಾಧ್ಯಮಗಳು ಹೇಳುವುದೇನು ?

Update: 2019-02-28 14:27 GMT

40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಫೆ.14ರ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಫೆ.26ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಾಲಕೋಟ್‌ನಲ್ಲಿಯ ಜೈಶೆ ಮುಹಮ್ಮದ್‌ನ ಭಯೋತ್ಪಾದನೆ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿತ್ತು. ಈ ಬೆಳಗಿನ ಜಾವದ ಕಾರ್ಯಾಚರಣೆಯಲ್ಲಿ ಜೈಷೆ ಮುಹಮ್ಮದ್ ನ ಅತಿದೊಡ್ಡ ಉಗ್ರ ತರಬೇತಿ ಕೇಂದ್ರವನ್ನು ನಾಶ ಪಡಿಸಿ ಬಹುದೊಡ್ಡ ಸಂಖ್ಯೆಯ ಜೈಷ್ ಉಗ್ರರನ್ನು , ತರಬೇತುದಾರರನ್ನು , ಹಿರಿಯ ಕಮಾಂಡರ್ ಗಳನ್ನು ಹಾಗು ಜಿಹಾದಿಗಳ ದೊಡ್ಡ ಗುಂಪುಗಳನ್ನು  ಕೊಂದು ಹಾಕಲಾಗಿದೆ ಎಂದು ಭಾರತ ಹೇಳಿತ್ತು. 

ಮರುದಿನವೇ ಪಾಕಿಸ್ತಾನವು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿತ್ತಲ್ಲದೆ,ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ತನ್ನ ವಶದಲ್ಲಿಟ್ಟುಕೊಂಡಿದೆ. ಈ ಬೆಳವಣಿಗೆಗಳ ವ್ಯಾಪಕತೆ ಮತ್ತು ಗಂಭೀರತೆಗಳು ಹಾಗೂ ದಕ್ಷಿಣ ಏಷ್ಯಾದ ಸ್ಥಿರತೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮಹತ್ವದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಭಾರತ ಮತ್ತು ಪಾಕಿಸ್ತಾನಗಳ ಮಾಧ್ಯಮಗಳಲ್ಲಿ ಮಾತ್ರವಲ್ಲ,ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಪ್ರಮುಖ ಸುದ್ದಿಯಾಗಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳು ಏನು ಹೇಳುತ್ತಿವೆ ಎನ್ನುವುದು ಇಲ್ಲಿದೆ....

ದಿ ನ್ಯೂಯಾರ್ಕ್ ಟೈಮ್ಸ್(ಎನ್‌ವೈಟಿ)

ಫೆ.27ರಂದು ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ನ ಎನ್‌ವೈಟಿ ಪ್ರಕಟಿಸಿದ್ದ ವರದಿಯೊಂದು ಪಾಕಿಸ್ತಾನದ ಮೇಲೆ ಭಾರತದ ವಾಯುದಾಳಿಯ ಬಳಿಕ ಉದ್ವಿಗ್ನತೆಯನ್ನು ತಗ್ಗಿಸಲು ಉಭಯ ರಾಷ್ಟ್ರಗಳು ಸ್ವಲ್ಪ ಅವಕಾಶವನ್ನು ಉಳಿಸಿಕೊಂಡಿವೆ ಎಂದು ಬೆಟ್ಟು ಮಾಡಿತ್ತು. ತಾನು ಪುಲ್ವಾಮಾ ದಾಳಿಯ ಪ್ರತೀಕಾರವನ್ನು ತೀರಿಸಿಕೊಂಡಿದ್ದೇನೆ ಎಂದು ಭಾರತವು ಹೇಳಿದರೆ,ಭಾರತದ ದಾಳಿಯಿಂದ ನಿಜಕ್ಕೂ ಅಂತಹ ಹಾನಿಯೇನಾಗಿಲ್ಲ ಎಂದು ಪಾಕಿಸ್ತಾನವು ಹೇಳಿಕೊಂಡಿದೆ. ಹೀಗಾಗಿ ಈಗಲೂ ಪರಿಸ್ಥಿತಿಯು ತಿಳಿಗೊಳ್ಳುವ ಸಾಧ್ಯತೆಯೊಂದು ಕಂಡು ಬರುತ್ತಿದೆ ಎಂದು ಅದು ಹೇಳಿತ್ತು.

ಭಾರತದಲ್ಲಿ ಮುಂಬರುವ ಚುನಾವಣೆಗಳನ್ನು ಬೆಟ್ಟು ಮಾಡಿದ್ದ ವರದಿಯು,ಭಾರತೀಯ ವಾಯುದಾಳಿಯು ರಾಜಕೀಯ ಸಾಂಕೇತಿಕತೆಯಾಗಿದೆಯಷ್ಟೇ ಎಂದೂ ಹೇಳಿತ್ತು.

ಆದರೆ,ಫೆ.27ರಂದು ಪಾಕ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ ಓರ್ವ ಪೈಲಟ್ ನಾಪತ್ತೆಯಾಗಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೃಢಪಡಿಸಿದ ಬಳಿಕ ಪ್ರಕಟಗೊಂಡಿದ್ದ ತನ್ನ ವರದಿಯಲ್ಲಿ ಎನ್‌ವೈಟಿಯು,ಭಾರತೀಯ ಪೈಲಟ್‌ನನ್ನು ಸೆರೆ ಹಿಡಿದಿರುವುದು ಕೇವಲ ಪ್ರಧಾನಿ ನರೇಂದ್ರ ಮೋದಿಯವರ ಸ್ಥಿತಿಯನ್ನು ದುರ್ಬಲಗೊಳಿಸಬಹುದು ಮತ್ತು ಸೇನೆಯ ಮೂಲಕ ಪ್ರತ್ಯುತ್ತರ ನೀಡುವುದನ್ನು ಅವರು ಆಯ್ಕೆ ಮಾಡಿಕೊಂಡರೆ ಅದು ಪರಿಸ್ಥಿತಿಯು ಇನ್ನಷ್ಟು ಅಪಾಯಕಾರಿಯಾಗಲು ಕಾರಣವಾಗಬಹುದು ಎಂದು ಹೇಳಿದೆ. ಉಭಯ ಸರಕಾರಗಳು ತಮ್ಮ ಮತದಾರರಿಗೆ ಕೃತಜ್ಞವಾಗಿರಬಹುದು ಮತ್ತು ಇಂತಹ ಸ್ಥಿತಿಯಲ್ಲಿ ದೃಢವಾದ ಮಿಲಿಟರಿ ಕಾರ್ಯಾಚರಣೆಗಳಿಗೆ ಕರೆ ನೀಡಿದರೆ ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳಲು ಅವಕಾಶವು ಸೀಮಿತವಾಗಿರುತ್ತದೆ ಎನ್ನುವುದು ಎನ್‌ವೈಟಿಯ ಅಭಿಪ್ರಾಯವಾಗಿದೆ.

ತನ್ಮಧ್ಯೆ ಇದೇ ಎನ್‌ವೈಟಿಯ ಇನ್ನೊಂದು ವರದಿಯು ಭಾರತೀಯ ಟಿವಿ ಸುದ್ದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ಧ ಪ್ರಚೋದಕರ ಪ್ರಾಬಲ್ಯವನ್ನು ಬೆಟ್ಟು ಮಾಡಿದೆ. ಭಾರತಿಯ ವಾಯುದಾಳಿಯಿಂದ ಸಂಭವಿಸಿರುವ ಹಾನಿಯ ಕುರಿತು ಹೇಳಿಕೆಗಳಲ್ಲಿಯ ವ್ಯತ್ಯಾಸವನ್ನೂ ಅದು ಬೆಟ್ಟು ಮಾಡಿದೆ. ಇನ್ನೆರಡು ತಿಂಗಳಿಗೆ ಪುನರಾಯ್ಕೆಗೊಳ್ಳಲು ಸಜ್ಜಾಗುತ್ತಿರುವ ಮೋದಿ ಸರಕಾರವು ಪಾಕಿಸ್ಥಾನದ ಬಾಲಕೋಟ್‌ನಲ್ಲಿಯ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿ 300 ಉಗ್ರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಇದನ್ನು ನಿರಾಕರಿಸಿರುವ ಪಾಕಿಸ್ತಾನದ ಸೇನಾ ವಕ್ತಾರ ಮೇ.ಜ.ಆಸಿಫ್ ಗಫೂರ ಅವರು ಭಾರತೀಯ ಯುದ್ಧವಿಮಾನಗಳ ದಾಳಿಯು ಯಾವುದೇ ಸಾವುನೋವುಗಳು ಅಥವಾ ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡಿಲ್ಲ ಎಂದು ಹೇಳಿದ್ದಾರೆ ಎನ್ನುವುದನ್ನು ಅದು ಪ್ರಮುಖವಾಗಿ ಬಿಂಬಿಸಿದೆ.

ದಿ ವಾಷಿಂಗ್ಟನ್ ಪೋಸ್ಟ್

ಉಭಯ ರಾಷ್ಟ್ರಗಳ ನಡುವೆ ಹಾಲಿ ನಡೆಯುತ್ತಿರುವ ಸಂಘರ್ಷವನ್ನು ಪೋಸ್ಟ್ ವಿವರವಾಗಿಯೇ ವರದಿ ಮಾಡುತ್ತಿದೆ. ಅದು ಈವರೆಗೆ ‘ಭಾರತೀಯ ಯುದ್ಧವಿಮಾನವನ್ನು ಹೊಡೆದುರುಳಿಸಿದ ಪಾಕಿಸ್ತಾನದಿಂದ ಪೈಲಟ್ ಸೆರೆ,ಇನ್ನಷ್ಟು ಹೆಚ್ಚಿದ ಶತ್ರುತ್ವ’;‘ಸೆರೆಯಾದ ಭಾರತೀಯ ಪೈಲಟ್‌ನ ವೀಡಿಯೊವನ್ನು ಟ್ವೀಟಿಸಿ ಪಾಕಿಸ್ತಾನವು ಜಿನೀವಾ ಒಪ್ಪಂದವನ್ನು ಉಲ್ಲಂಘಿಸಿದೆ,ತಜ್ಞರ ಹೇಳಿಕೆ’ ಮತ್ತು ಉಗ್ರರ ಶಿಬಿರದ ಮೇಲೆ ಭಾರತದ ವಾಯುದಾಳಿ ‘ಕಪೋಲಕಲ್ಪಿತ’ ಎಂದ ಪಾಕಿಸ್ತಾನ’ದಂತಹ ಶೀರ್ಷಿಕೆಗಳೊಂದಿಗೆ ಕನಿಷ್ಠ ಡಝನ್‌ಗೂ ಅಧಿಕ ಸುದ್ದಿವರದಿಗಳನ್ನು ಪ್ರಕಟಿಸಿದೆ.

ಎನ್‌ವೈಟಿಯಂತೆ ಪೋಸ್ಟ್‌ನಲ್ಲಿಯ ಸುದ್ದಿತುಣುಕೊಂದು ಸಹ ಸಾವುನೋವುಗಳಿಗೆ ಸಂಬಂಧಿಸಿದಂತೆ ತದ್ವಿರುದ್ಧ ಹೇಳಿಕೆಗಳನ್ನು ಬೆಟ್ಟುಮಾಡಿದೆ. ಭಯೋತ್ಪಾದಕ ಶಿಬಿರಗಳ ಮೆಲೆ ದಾಳಿ ನಡೆಸಲು ಭಾರತೀಯ ವಾಯುಪಡೆಯು ನಿಯಂತ್ರಣ ರೇಖೆಯನ್ನು ದಾಟಿದ್ದು ಈ ಅಣ್ವಸ್ತ್ರ ಸಜ್ಜಿತ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಸಂಕೇತವಾಗಿದೆ ಎಂದು ಅದು ಹೇಳಿದೆ.

ಅಮೆರಿಕನ್ ಬ್ರಾಡ್ ಕಾಸ್ಟಿಂಗ್ ಕಂಪನಿ(ಎಬಿಸಿ ನ್ಯೂಸ್)

ಎಬಿಸಿ ನ್ಯೂಸ್ ಭಾರತೀಯ ವಾಯಪಡೆಯ ದಾಳಿ,ಪಾಕಿಸ್ತಾನದಿಂದ ಭಾರತೀಯ ಪೈಲಟ್ ಸೆರೆ,ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಮತ್ತು ಇನ್ನೂ ಹಲವಾರು ಸುದ್ದಿಗಳನ್ನು ವರದಿ ಮಾಡಿದೆ.

ಉಭಯ ರಾಷ್ಟ್ರಗಳು ಹೇಳಿಕೊಂಡಿರುವ ಸಾವುನೋವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುವುದನ್ನು ಎಬಿಸಿ ನ್ಯೂಸ್ ಗಮನಕ್ಕೆ ತೆಗೆದುಕೊಂಡಿರುವಂತಿದೆ. ‘ಭಾರೀ ಸಂಖ್ಯೆಯಲ್ಲಿ’ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿಗಳು ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದರೆ,ದಾಳಿಯ ಪರಿಣಾಮಕಾರಿತ್ವವನ್ನು ಪಾಕಿಸ್ತಾನವು ನಿರಾಕರಿಸಿದೆ ಎಂದು ಹೇಳಿರುವ ಅದರ ವರದಿಯು, ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ಬಳಿಕ ಅವುಗಳನ್ನು ಯಶಸ್ವಿಯಾಗಿ ಹಿವ್ಮೆುಟ್ಟಿಸಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪಾಕ್ ಸೇನೆಯ ವಕ್ತಾರರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ ಎಂದಿದೆ.

ದಿ ಗಾರ್ಡಿಯನ್

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ತೆರೆದಿಡಲು ದಿ ಗಾರ್ಡಿಯನ್ ದೃಶ್ಯ ಮಾರ್ಗದರ್ಶಿಯನ್ನು ಬಳಸಿಕೊಂಡಿದೆ. ಉಭಯ ರಾಷ್ಟ್ರಗಳು ಹೊಂದಿರುವ ಅಣ್ವಸ್ತ್ರಗಳು ಮತ್ತು ಅವುಗಳ ಮಿಲಿಟರಿ ಬಲಾಬಲಗಳನ್ನು ಹೋಲಿಸುವ ಜೊತೆಗೆ ಮಾರ್ಗದರ್ಶಿಯು ಫೆ.26-27ರಂದು ನಡೆದ ಬೆಳವಣಿಗೆಗಳನ್ನು ಪಟ್ಟಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನಗಳಿಂದ ಬರುತ್ತಿರುವ ವಿರೋಧಾಭಾಸದ ಕಥನಗಳನ್ನು ದಿ ಗಾರ್ಡಿಯನ್ ಪ್ರಮುಖವಾಗಿ ಬಿಂಬಿಸಿದೆ. ಭಾರೀ ಸಂಖ್ಯೆಯಲ್ಲಿ ಜೈಷ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಜಯ ಗೋಖಲೆ ಅವರ ಹೇಳಿಕೆಯನ್ನು ಬೆಟ್ಟು ಮಾಡಿರುವ ಅದು,ಭಾರತೀಯ ಬಾಂಬ್ ದಾಳಿಯ ಪರಿಣಾಮ ಮರಗಳು ಬುಡಮೇಲಾಗಲು ಮತ್ತು ನೆಲದಲ್ಲಿ ಹೊಂಡಗಳುಂಟಾಗುವುದಕ್ಕಷ್ಟೇ ಸೀಮಿತವಾಗಿದೆ ಎಂದು ಹೇಳಿರುವ ಪಾಕಿಸ್ತಾನವು ಅವುಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ.

ಭಾರತದಲ್ಲಿ ದಾಳಿಯನ್ನು ಸಂಭ್ರಮಿಸಲಾಗಿದೆ,ಆದರೆ ಪಾಕಿಸ್ತಾನದಿಂದ ಅಂತಹ ಪ್ರತೀಕಾರದ ಕ್ರಮ ಕಂಡು ಬಾರದ್ದರಿಂದ ಭಾರತದ ಯುದ್ಧವಿಮಾನಗಳು ಯಾವುದೇ ಮಹತ್ವದ ತಾಣದ ಮೇಲೆ ದಾಳಿ ನಡೆಸಿದ್ದವೇ ಅಥವಾ ಫೆ.14ರ ಪುಲ್ವಾಮಾ ದಾಳಿಯಿಂದ ಜನರಲ್ಲಿ ಉಂಟಾಗಿರುವ ಆಕ್ರೋಶವನ್ನು ತಣಿಸುವ ಲೆಕ್ಕಾಚಾರದಿಂದ ಈ ದಾಳಿಯನ್ನು ನಡೆಸಲಾಗಿತ್ತೇ ಎನ್ನುವುದು ಮಂಗಳವಾರ ಅಸ್ಪಷ್ಟವಾಗಿತ್ತು. ರಾತ್ರಿ ತಾವು ನಾಲ್ಕೈದು ಸ್ಫೋಟಗಳ ಶಬ್ದಗಳನ್ನು ಕೇಳಿದ್ದೆವು,ಕೆಲವು ಮನೆಗಳು ಹಾನಿಗೀಡಾಗಿದ್ದವು ಮತ್ತು ನೆಲದಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿದ್ದವು ಎಂದು ಬಾಲಕೋಟ್ ನಿವಾಸಿಗಳನ್ನು ಉಲ್ಲೇಖಿಸಿ ಪಾಕಿಸ್ತಾನದಲ್ಲಿಯ ಸ್ಥಳೀಯ ಮಾಧ್ಯಮಗಳು ಮತ್ತು ರಾಯ್ಟರ್ಸ್ ವರದಿ ಮಾಡಿವೆ ಎಂದು ಗಾರ್ಡಿಯನ್ ವರದಿ ಹೇಳಿದೆ.

ಅಲ್ ಜಝೀರಾ 

ಇನ್ನೊಂದೆಡೆ ಅಲ್ ಜಝೀರಾ ಭಾರತೀಯ ಹೇಳಿಕೆಗಳ ಖಚಿತತೆಯನ್ನು ಪರಿಶೀಲಿಸಿರುವ ತಳಮಟ್ಟದ ವರದಿಯನ್ನು ಪ್ರಕಟಿಸಿದೆ. ಭಾರೀ ಸಂಖ್ಯೆಯಲ್ಲಿ ಜೈಷ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ವಿದೇಶಾಂಗ ಕಾರ್ಯದರ್ಶಿ ಗೋಖಲೆಯವರ ಹೇಳಿಕೆಗೆ ವಿರುದ್ಧವಾಗಿ ವರದಿಯ ಶೀರ್ಷಿಕೆಯು ‘ಯಾವುದೇ ಸಾವುನೋವುಳಾಗಿಲ್ಲ’ ಎಂದು ಹೇಳಿದೆ.

ಭಾರತೀಯ ದಾಳಿಯ ಬಳಿಕ ಯಾವುದೇ ಶವಗಳು ಅಥವಾ ಗಾಯಾಳುಗಳನ್ನು ತಾವು ನೋಡಲಿಲ್ಲ ಎಂದು ಘಟನಾ ಸ್ಥಳಕ್ಕೆ ಧಾವಿಸಿದ್ದ ಸ್ಥಳೀಯ ಆಸ್ಪತ್ರೆಯ ಅಧಿಕಾರಿಗಳು ಮತ್ತು ಹಲವಾರು ನಿವಾಸಿಗಳು ಹೇಳಿದ್ದಾರೆ ಎಂದು ಈ ವರದಿಯು ತಿಳಿಸಿದೆ. ವಾಯುದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯೋರ್ವನ ಹೇಳಿಕೆಯನ್ನೂ ಅದು ಒಳಗೊಂಡಿದೆ.

ಮುಖ್ಯವಾಗಿ ಅಲ್ ಜಝೀರಾ ದಾಳಿ ಸ್ಥಳದ ಬಳಿ ಜೈಷ್‌ನ ಸೆಮಿನರಿಯೊಂದನ್ನು ಗಮನಿಸಿದೆ,ಆದರೆ ಅಲ್ಲಿಗೆ ಭೇಟಿ ನೀಡಲು ಅದಕ್ಕೆ ಅವಕಾಶ ನಿರಾಕರಿಸಲಾಗಿತ್ತು.

ಅಲ್ ಜಝೀರಾ ವಾಹಿನಿಯಲ್ಲಿ ಇನಸೈಡ್ ಸ್ಟೋರಿ ಚರ್ಚೆಯಲ್ಲಿ ನಿರೂಪಕಿ ಲೌರಾ ಕೈಲ್ ಅವರು ಉಭಯ ದೇಶಗಳ ವಿರೋಧಾಭಾಸದ ಹೇಳಿಕೆಗಳನ್ನೂ ಉಲ್ಲೇಖಿಸಿದ್ದರು. ಅಂತರರಾಷ್ಟ್ರೀಯ ವಿಮಾನಯಾನಗಳಿಗೆ ವ್ಯತ್ಯಯ,ಉಭಯ ರಾಷ್ಟ್ರಗಳ ಹೇಳಿಕೆಗಳು,ನಿಯಂತ್ರಣ ರೇಖೆಯಲ್ಲಿನ ಗ್ರಾಮಸ್ಥರಲ್ಲಿ ಮೂಡಿರುವ ಭೀತಿ ಮತ್ತು ಇನ್ನೂ ಹಲವಾರು ವರದಿಗಳು ಅಲ್ ಜಝೀರಾದ ಸುದ್ದಿ ಪ್ರಸಾರದಲ್ಲಿ ಒಳಗೊಂಡಿದ್ದವು.

ಎನ್‌ವೈಟಿಯಂತೆ ಅಲ್ ಜಝೀರಾದಲ್ಲಿನ ಅಭಿಪ್ರಾಯ ತುಣುಕೊಂದು ಸಹ ಭಾರತದಲ್ಲಿ ಮುಂಬರುವ ಚುನಾವಣೆಗಳನ್ನು ಬೆಟ್ಟುಮಾಡಿದೆ. ಮುಂಬರುವ ರಾಷ್ಟ್ರೀಯ ಚುನಾವಣೆಗಳು ದಾಳಿ ನಡೆಸಲು ಭಾರತಕ್ಕೆ ಕಾರಣಗಳ ಮೇಲೆ ಭಾಗಶಃ ಪ್ರಭಾವ ಬೀರಿದ್ದಿರಬಹುದು ಮತು ಪ್ರಧಾನಿ ನರೇಂದ್ರ ಮೋದಿಯವರು ಇನ್ನೊಂದು ಅಧಿಕಾರಾವಧಿಯ ಮೇಲೆ ಕಣ್ಣಿಟ್ಟಿರುವುದನ್ನು ಪರಿಗಣಿಸಿದರೆ ಇಂತಹ ಸೇನಾ ಉದ್ವಿಗ್ನತೆಯು ಇನ್ನಷ್ಟು ಅಪಾಯಕಾರಿಯಾಗಿರುತ್ತದೆ ಎಂದು ಅದು ಹೇಳಿದೆ.

ಬಿಬಿಸಿ

ಬಿಬಿಸಿಯು ‘ಅಭಿನಂದನ್:ಪಾಕಿಸ್ತಾನವು ಸೆರೆ ಹಿಡಿದಿರುವ ಭಾರತೀಯ ಪೈಲಟ್ ಯಾರು?’ ಎಂಬ ಶೀರ್ಷಿಕೆಯ ವರದಿಯೊಂದನ್ನು ಗುರುವಾರ ಬೆಳಿಗ್ಗೆ ಪ್ರಸಾರಿಸಿದೆ. ಇದಲ್ಲದೆ ಪೈಲಟ್ ಬಿಡುಗಡೆಗೆ ಭಾರತದ ಒತ್ತಾಯ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹಲವಾರು ವರದಿಗಳನ್ನು ಅದು ಮಾಡಿದೆ. ಅದು ಪ್ರಕಟಿಸಿದ ಅಭಿಪ್ರಾಯ ವರದಿಯೊಂದರಲ್ಲಿ ಪರಮಾಣು ಸಂಘರ್ಷದ ಅಪಾಯವನ್ನೂ ಚರ್ಚಿಸಲಾಗಿದೆ. ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಅಣ್ವಸ್ತ್ರ ಸಮರದ ಸಾಧ್ಯತೆಯು ಯಾವಾಗಲೂ ನಿಜವಾದ ಬೆದರಿಕೆಯಾಗಿರುವುದು ವಿಷಾದನೀಯವಾಗಿದೆ. ಆದರೆ ಸದ್ಯಕ್ಕೆ ಅಂತಹ ಸಂಭಾವ್ಯತೆಯಿಂದ ಬಹಳಷ್ಟು ದೂರದಲ್ಲಿ ನಾವಿದ್ದೇವೆ. ಆಕಸ್ಮಿಕವಾಗಿ ಅಥವಾ ಅನಧಿಕೃತವಾಗಿ ಅಣ್ವಸ್ತ್ರಗಳ ಬಳಕೆ(ಇಂತಹ ಸಾಧ್ಯತೆ ಕಡಿಮೆ)ಯನ್ನು ಬಿಟ್ಟರೆ ಈ ಸಂಘರ್ಷ ತೀವ್ರಗೊಳ್ಳುವವರೆಗೂ ಪರಮಾಣು ಬಳಕೆಯ ಸಾಧ್ಯತೆಗಳಿಲ್ಲ ಎಂದು ಅದು ಹೇಳಿದೆ.

ದಿ ಟೆಲಿಗ್ರಾಫ್(ಯುಕೆ)

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಹಾಲಿ ಬಿಕ್ಕಟ್ಟು ಅಣ್ವಸ್ತ್ರ ಸಜ್ಜಿತ ಉತ್ತರ ಕೊರಿಯಾ ಒಡ್ಡಿರುವ ಬೆದರಿಕೆಗಿಂತ ಹೇಗೆ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಯಿದೆ ಎನ್ನುವುದನ್ನು ಟೆಲಿಗ್ರಾಫ್ ವರದಿಯು ಬೆಟ್ಟುಮಾಡಿದೆ.

ಉತ್ತರ ಕೊರಿಯಾವನ್ನು ಪರಮಾಣು ನಿಶ್ಶಸ್ತ್ರೀಕರಿಸಲು ಹಾನೊಯ್‌ನಲ್ಲಿ ನಡೆಯುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್-ಉನ್ ನಡುವಿನ ಮಾತುಕತೆಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದ್ದರೆ ಅಲ್ಲಿಂದ 2,000 ಮೈಲುಗಳ ಅಂತರದಲ್ಲಿ ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ಪರಮಾಣು ಬೆದರಿಕೆ ಸೃಷ್ಟಿಯಾಗಿದೆ ಎಂದು ವರದಿಯ ಆರಂಭದ ಸಾಲುಗಳಲ್ಲಿ ಹೇಳಿರುವ ಅದು,ಭಾರತ ಮತ್ತು ಪಾಕಿಸ್ತಾನಗಳು ಅಣ್ವಸ್ತ್ರ ಸಜ್ಜಿತವಾಗಿರುವದರಿಂದ ವಿಶ್ವದ ಅತ್ಯಂತ ಹಳೆಯ ಹೆಪ್ಪುಗಟ್ಟಿರುವ,ಕಾಶ್ಮೀರ ಕುರಿತು ಹೊಗೆಯಾಡುತ್ತಿರುವ ವಿವಾದವು ಅತಂತ ಹೆಚ್ಚು ಭೀತಿಯದ್ದಾಗಿದೆ ಎಂದಿದೆ. ಎರಡೂ ರಾಷ್ಟ್ರಗಳಲ್ಲಿ ಮತದಾರರು ಕಠಿಣ ಕ್ರಮವನ್ನು ಬೆಂಬಲಿಸುತ್ತಿದ್ದಾರೆ. ಜನರ ಈ ಒತ್ತಡವು ಮೋದಿ ಮತ್ತು ಖಾನ್ ನಡುವೆ ರಾಜಿಯನ್ನು ತಡೆಯುತ್ತಿದೆ. ಹಾಗೆ ಮಾಡಿದರೆ ತಾವು ಜನರ ಕಣ್ಣಲ್ಲಿ ದುರ್ಬಲರಾಗುತ್ತೇವೆ ಎಂಬ ಭೀತಿ ಈ ನಾಯಕರನ್ನು ಕಾಡುತ್ತಿದೆ ಎಂದು ಇನ್ನೊಂದು ವರದಿಯಲ್ಲಿ ದಿ ಟೆಲಿಗ್ರಾಫ್ ಹೇಳಿದೆ.

ಚೀನಾ ಡೇಲಿ

ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಒಡೆತನದಲ್ಲಿರುವ ಇಂಗ್ಲೀಷ್ ದೈನಿಕವಾಗಿರುವ ಚೀನಾ ಡೇಲಿ ಭಾರತ-ಪಾಕ್ ನಡುವಿನ ಬಿಕ್ಕಟ್ಟಿನ ಕುರಿತು ಸುಮಾರು 10 ವರದಿಗಳನ್ನು ಪ್ರಕಟಿಸಿದೆ. ಭಾರತೀಯ ವಿಮಾನವು ಎಲ್‌ಒಸಿ ದಾಟಿದೆ ಎಂದು ಪಾಕಿಸ್ತಾನ ಹೇಳಿದೆ;ಮೈಕ್ ಪಾಂಪಿಯೊ ಜೊತೆ ಪಾಕ್ ವಿದೇಶಾಂಗ ಸಚಿವರ ಮಾತುಕತೆ,ಭಾರತದ ಆಕ್ರಮಣಕಾರಿ ಧೋರಣೆಯು ಅಪಘಾನಿಸ್ತಾನ ಶಾಂತಿ ಮಾತುಕತೆಯನ್ನು ಹಳಿ ತಪ್ಪಿಸಬಹುದು ಎಂದು ಎಚ್ಚರಿಕೆ;ಮಾತುಕತೆಗಾಗಿ ಪಾಕ್ ಪ್ರಧಾನಿಯಿಂದ ಭಾರತಕ್ಕೆ ಆಹ್ವಾನ; ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ದಾಳಿಯಲ್ಲಿ 300 ಉಗ್ರರನ್ನು ಕೊಲ್ಲಲಾಗಿದೆ ಎಂದು ಭಾರತ ಸರಕಾರದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ, ಆದರೆ ಯಾವುದೇ ವಿವರಗಳನ್ನು ಒದಗಿಸಿಲ್ಲ ಎಂದು ಅದು ಸುದ್ದಿಯೊಂದರಲ್ಲಿ ಹೇಳಿದೆ.

ಕೃಪೆ : newslaundry.com

Writer - ಚೆರಿ ಅಗರ್ವಾಲ್ - newslaundry.com

contributor

Editor - ಚೆರಿ ಅಗರ್ವಾಲ್ - newslaundry.com

contributor

Similar News