×
Ad

ಮಂಗಳೂರು ವಿವಿಯ ಎಲ್ಲಾ ಪೀಠಗಳು ಒಂದೇ ಸೂರಿನಡಿಗೆ : ಸಚಿವ ಖಾದರ್

Update: 2019-02-28 20:24 IST

ಮಂಗಳೂರು, ಫೆ. 28: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಸ್ಥಾಪಿಸಲಾಗಿರುವ ಎಲ್ಲಾ ಪೀಠಗಳನ್ನೂ ಕೂಡ ಒಂದೇ ಸೂರಿನಡಿಗೆ ತರಲು ಉದ್ದೇಶಿಸಲಾಗಿದ್ದು, ಸರ್ವ ಪೀಠದ ಸಂಯೋಜಕರು ಇದಕ್ಕೆ ಬೇಕಾಗುವ ದಾಖಲೆಗಳನ್ನು ಸರಕಾರಕ್ಕೆ ಶೀಘ್ರ ಸಲ್ಲಿಸಿದರೆ ತಕ್ಷಣ ಕಾರ್ಯಪ್ರವೃತ್ತನಾಗುವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಮಂಗಳೂರು ವಿವಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿ ಅಧ್ಯಯನ ಪೀಠವನ್ನು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವ ಬ್ಯಾರಿಗಳ ಸತತ ಪ್ರಯತ್ನದ ಫಲವಾಗಿ 11 ವರ್ಷದ ಹಿಂದೆ ಬ್ಯಾರಿ ಅಕಾಡಮಿಯನ್ನು ಸ್ಥಾಪಿಸಲಾಗಿತ್ತು. ಇದಕ್ಕಾಗಿ ಅಂದು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ದಿ. ಮಹದೇವಪ್ರಸಾದ್ ಅವರನ್ನು ಅಭಿನಂದಿಸಲೇಬೇಕು. ಎರಡು ವರ್ಷದ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಬ್ಯಾರಿ ಅಧ್ಯಯನ ಪೀಠ ಸ್ಥಾಪಿಸಿದೆ. ಅಂದು ಈ ಪೀಠಕ್ಕೆ 2 ಕೋ.ರೂ. ಮೀಸಲಿಟ್ಟಿದ್ದು, ಶೇ.25ರಷ್ಟು ಹಣ ಖಾತೆಗೆ ಜಮೆ ಆಗಿದೆ. ಉಳಿದ ಹಣವನ್ನು ಶೀಘ್ರ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದ ಖಾದರ್, ಮಂಗಳೂರು ವಿವಿಯಲ್ಲಿ ಸುಮಾರು 29 ಪೀಠಗಳಿವೆ. ಬಹುಷಃ ರಾಜ್ಯದ ಯಾವ ವಿವಿಯಲ್ಲೂ ಭಾಷೆ, ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಪೀಠಗಳಿಲ್ಲ. ಹಾಗಾಗಿ ಈ ಎಲ್ಲಾ ಪೀಠಗಳೂ ಕೂಡ ಪರಸ್ಪರ ಸಹಭಾಗಿತ್ವದಿಂದ ಚಟುವಟಿಕೆಗಳನ್ನು ಮಾಡಬೇಕು. ವಿವಿ ಅಧೀನದ ಪೀಠಗಳು ಬೇರೆ ಬೇರೆ ಕಡೆ ಚದುರಿದೆ. ಇವನ್ನೆಲ್ಲಾ ಒಂದೇ ಸೂರಿನಡಿಗೆ ತರಬೇಕಿದೆ. ಅಲ್ಲದೆ ಎಲ್ಲಾ ಪೀಠಗಳಿಗೆ ಸಮಾನ ನಿರಖು ಠೇವಣಿ ಹಾಗೂ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದರು.

ದ.ಕ.ಜಿಲ್ಲೆ ಕೂಡ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ವೈಶಿಷ್ಟತೆಯನ್ನು ಪಡೆದಿದೆ. ಇಲ್ಲಿನ ಹಿಂದೂ, ಮುಸ್ಲಿಂ, ಕ್ರೈಸ್ತರು ತಮ್ಮದೇ ಆದ ಮಾತೃಭಾಷೆ ಯನ್ನಾಡುತ್ತಾರೆ. ಲಿಪಿಗಳಿಲ್ಲದಿದ್ದರೂ ಕೂಡ ಈ ಭಾಷೆಗೆ ಖಂಡಿತಾ ಸಾವಿಲ್ಲ. ಇವುಗಳ ಉಳಿವಿಗೆ ಸಾಹಿತಿ-ಕಲಾವಿದರ ಪ್ರಯತ್ನ ಅಪಾರವಾಗಿದೆ ಎಂದ ಖಾದರ್, ಸ್ವಾಭಿಮಾನಕ್ಕೆ ಹೆಸರಾದ ಬ್ಯಾರಿಗಳು ಶ್ರಮಜೀವಿಗಳು. ಎಂತಹ ಕಷ್ಟಕಾಲದಲ್ಲೂ ಬದುಕನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಸರ್ವ ಧರ್ಮ ಮತ್ತು ಜಾತಿ-ಜನಾಂಗವನ್ನು ಪ್ರೀತಿಸುವ ಹಾಗೂ ಅವರೊಂದಿಗೆ ಸಹಬಾಳ್ವೆ ನಡೆಸುವ ಬ್ಯಾರಿಗಳು ಎಂದಿಗೂ ಕೋಮುವಾದಿಗಳಾಗಲು ಸಾಧ್ಯವಿಲ್ಲ ಎಂದು ನುಡಿದರು.

ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ. ಕಿಶೋರಿ ನಾಯ್ಕೊ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರ ರಾವ್ ಮಾತನಾಡಿ ಬ್ಯಾರಿ ನಮ್ಮ ಭಾಷೆ, ನಮ್ಮೆಲ್ಲರ ಭಾಷೆ. ಇದು ನಮಗೆಲ್ಲರಿಗೂ ಅಭಿಮಾನದ ಸಂಗತಿ ಯಾಗಿದೆ. ಪೀಠ ಬರೇ ಪೀಠವಾಗಬಾರದು. ಕಾಟಾಚಾರದ ಕೆಲಸ ಕಾರ್ಯವೂ ಆಗಬಾರದು. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದಂತೆ ತಳಸ್ಪರ್ಶಿ ಅಧ್ಯಯನ ನಡೆಯಬೇಕು. ಬ್ಯಾರಿ ಭಾಷಿಗರಲ್ಲೂ ಅಧ್ಯಯನಶೀಲರಿದ್ದಾರೆ. ಯುವ ಜನಾಂಗವನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದರು.

ಬ್ಯಾರಿ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಕರಂಬಾರ್ ಮಾತನಾಡಿ ಬ್ಯಾರಿ ಅಧ್ಯಯನ ಪೀಠದ ಜೊತೆ ಅಕಾಡಮಿಯು ಸದಾ ಕೈ ಜೋಡಿಸಲು ಸಿದ್ಧವಿದೆ. ರಾಜ್ಯ ಸರಕಾರ ಯಾವ ಉದ್ದೇಶಕ್ಕಾಗಿ ಅಕಾಡಮಿ ಮತ್ತು ಅಧ್ಯಯನ ಪೀಠವನ್ನು ಸ್ಥಾಪಿಸಿದೆಯೋ ಅದನ್ನು ಈಡೇರಿಸಲು ಮುಂದಾಗೋಣ ಎಂದರು.

ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ ಬ್ಯಾರಿ ಅಕಾಡಮಿಯ ಸ್ಥಾಪನೆಯ ಬಳಿಕ ಭಾಷೆಗೊಂದು ಮಾನ್ಯತೆ ಸಿಕ್ಕಿದೆ. ಇದೀಗ ಬ್ಯಾರಿ ಅಧ್ಯಯನ ಪೀಠದ ಸ್ಥಾಪನೆಯ ಬಳಿಕ ಭಾಷೆಗೆ ಗೌರವವೂ ಸಿಕ್ಕಿದೆ. ನಿರಖು ಠೇವಣಿಯ ಬಡ್ಡಿಯಿಂದಷ್ಟೇ ಚಟುವಟಿಕೆಗಳನ್ನು ಸೀಮಿತ ಗೊಳಿಸದೆ ದಾನಿಗಳ ನೆರವು ಪಡೆದು ಅಧ್ಯಯನಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ವೇದಿಕೆಯಲ್ಲಿ ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕೊಣಾಜೆ ಗ್ರಾಪಂ ಅಧ್ಯಕ್ಷ ನಝರ್ ಷಾ.ಪಟ್ಟೋರಿ, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಇಬ್ರಾಹೀಂ ಕೋಡಿಜಾಲ್, ವಿವಿಯ ಸರ್ವ ಪೀಠಗಳ ಸಂಯೋಜಕ ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು.

ಮಂಗಳೂರು ವಿವಿ ಕುಲಸಚಿವ ಎ.ಎಂ.ಖಾನ್ ಸ್ವಾಗತಿಸಿದರು. ಪೀಠದ ಸಂಯೋಜಕ ಪ್ರೊ. ಇಸ್ಮಾಯೀಲ್ ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News