ದೀರ್ಘಾವಧಿಯ ಪರಿಹಾರಕ್ಕೆ ಮಾತುಕತೆ, ರಾಜತಾಂತ್ರಿಕ ಒತ್ತಡ ಸೂಕ್ತ: ಸಿಧು ಪುನರುಚ್ಚಾರ

Update: 2019-02-28 15:03 GMT

ಅಮೃತಸರ, ಫೆ.28: ಗಡಿ ಭಾಗದಲ್ಲಿ ಮತ್ತು ಗಡಿಯೊಳಗೆ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಮಾತುಕತೆ ಮತ್ತು ರಾಜತಾಂತ್ರಿಕ ಒತ್ತಡದಿಂದ ಮಾತ್ರ ಸಾಧ್ಯ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪುನರುಚ್ಚರಿಸಿದ್ದಾರೆ.

‘ನಮಗೆ ಒಂದು ಆಯ್ಕೆಯಿದೆ’ ಎಂಬ ಶಿರೋನಾಮೆಯ ಎರಡು ಪುಟಗಳ ಹೇಳಿಕೆಯನ್ನು ಓದಿ ಹೇಳಿದ ಸಿಧು, ಭಯೋತ್ಪಾದನೆಗೆ ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಯೇ ಪರಿಹಾರವಾಗಿದೆ. ನಿರುದ್ಯೋಗ, ದ್ವೇಷಭಾವನೆ ಮತ್ತು ಹೆದರಿಕೆ ಪರಿಹಾರವಲ್ಲ ಎಂದಿದ್ದಾರೆ.

ಗಡಿಯ ಎರಡೂ ಭಾಗದಲ್ಲಿ ತಂತ್ರಜ್ಞರು ಅತ್ಯಂತ ಕೆಟ್ಟ ಕ್ರಮ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ. ಕೆಟ್ಟದ್ದನ್ನು ಮಾಡುವ ಮತ್ತು ಯೋಚಿಸುವ ಮೂಲಕ ಮಾತ್ರ ತಾವು ಸುರಕ್ಷಿತರಾಗಿರಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂಬುದು ಇವರ ಚಿಂತನೆಯಾಗಿದೆ. ಆದರೆ ಈ ವಿಶ್ವಾಸ ಕೇವಲ ಮರೀಚಿಕೆಯಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಗಾಬರಿಯೆಂಬ ಇಷ್ಟವಿಲ್ಲದ ಅತಿಥಿ ನಮ್ಮೊಡನಿದ್ದಾನೆ . ಇತರರ ಬಗ್ಗೆ ಕೆಟ್ಟದಾಗಿ ಯೋಚಿಸುವುದು ಸುಲಭ, ಆದರೆ ಇದು ನಮ್ಮನ್ನು ರಕ್ಷಿಸದು ಎಂದರು.

 ನಾನೋರ್ವ ಸ್ವಾತಂತ್ರ ಹೋರಾಟಗಾರನ ಪುತ್ರ. ದೇಶದ ಪರವಾಗಿಯೇ ಯಾವತ್ತೂ ನಿಲ್ಲುವವ. ಧೈರ್ಯವೇ ನನ್ನ ದೇಶಭಕ್ತಿಯ ನಿಜವಾದ ಪುರಾವೆಯಾಗಿದೆ. ನಮ್ಮಲ್ಲಿ ಹಲವರನ್ನು ಬಾಯಿ ಮುಚ್ಚಿಸಲು ಕಾರಣವಾದ ಗಾಬರಿಯನ್ನು ಮೀರಿ ನಿಂತು ನಾನು ಯೋಚಿಸಬಲ್ಲೆ ಮತ್ತು ಮಾತಾಡಬಲ್ಲೆ ಎಂದು ಸಿಧು ಹೇಳಿದರು. ಕೆಲವು ವ್ಯಕ್ತಿಗಳು ಮಾಡಿದ ಕಾರ್ಯಕ್ಕೆ ಇಡೀ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ ಎಂಬ ತತ್ವ ತನ್ನದು. ಪ್ರಧಾನಿ ಮೋದಿ ಹೇಳಿದ ‘ನಮ್ಮ ಹೋರಾಟ ಭಯೋತ್ಪಾದಕತೆಯ ಮತ್ತು ಮಾನವೀಯತೆಯ ಶತ್ರುಗಳ ವಿರುದ್ಧವಾಗಿದೆ, ಕಾಶ್ಮೀರಕ್ಕಾಗಿ ನಮ್ಮ ಹೋರಾಟ, ಕಾಶ್ಮೀರಿಗಳ ವಿರುದ್ಧವಲ್ಲ’ ಎಂಬ ಭಾವನೆ , ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ ‘ನಮ್ಮ ಹೋರಾಟ ಉಗ್ರರ ಸಂಘಟನೆ ವಿರುದ್ಧ, ಪಾಕಿಸ್ತಾನದ ವಿರುದ್ಧವಲ್ಲ’ ಎಂಬ ಭಾವನೆಯೇ ತನ್ನ ಭಾವನೆಯಾಗಿದೆ ಎಂದು ಸಿದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News