×
Ad

ಬಾಲಕೋಟ್ ಮೇಲೆ ವಾಯುಪಡೆ ದಾಳಿ: ಮಾಧ್ಯಮಗಳು ಕೊಂದ 300 - 400 ಉಗ್ರರ ಬಗ್ಗೆ ಸ್ವತಃ ಸೇನೆ ಹೇಳುವುದೇನು ?

Update: 2019-02-28 21:31 IST

ಹೊಸದಿಲ್ಲಿ,ಫೆ.28: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು  ಸ್ಪಷ್ಟವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ವಾಯುಪಡೆ ಏರ್ ವೈಸ್ ಮಾರ್ಶಲ್ ಆರ್.ಜಿ.ಕೆ ಕಪೂರ್ ತಿಳಿಸಿದ್ದಾರೆ ಎಂದು ಸುದ್ದಿ ತಾಣ ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ 300 ಉಗ್ರರು ಹತರಾಗಿದ್ದಾರೆಯೇ ಎಂದು ಸುದ್ದಿ ಸಂಸ್ಥೆ ಎಎನ್‌ಐ ಪ್ರತಿನಿಧಿ ಕೇಳಿದ ಪ್ರಶ್ನೆ ಗೆ ಕಪೂರ್ ಈ ರೀತಿ ಉತ್ತರಿಸಿದ್ದಾರೆ. 

ಈ ಸುದ್ದಿಗೋಷ್ಟಿಯಲ್ಲಿ ಸೇನಾ ಮೇಜರ್ ಜನರಲ್ ಸುರಿಂದರ್ ಸಿಂಗ್ ಮೆಹಲ್, ನೌಕಾಪಡೆಯ ಅಡ್ಮಿರಲ್ ದಲ್ಬೀರ್ ಸಿಂಗ್ ಗುಜ್ರಾಲ್ ಮತ್ತು ವಾಯುಪಡೆ ಏರ್ ವೈಸ್ ಮಾರ್ಶಲ್ ಆರ್.ಜಿ.ಕೆ ಕಪೂರ್ ಭಾಗವಹಿಸಿದ್ದರು. 

"ಶಿಬಿರಗಳಿಗೆ ಹಾನಿಯಾಗಿರುವ ಬಗ್ಗೆ ನಮ್ಮಲ್ಲಿ ವಿಶ್ವಾಸಾರ್ಹ ಸಾಕ್ಷಿಗಳಿವೆ. ನಾವು ಹಾರಿಸಿದ ಶಸ್ತ್ರಗಳು ಉದ್ದೇಶಿತ ಗುರಿಗಳ ಮೇಲೆ ಬಿದ್ದಿವೆ ಮತ್ತು ಉದ್ದೇಶಿತ ಹಾನಿಯನ್ನು ಮಾಡಿದೆ. ಆದರೆ ಈ ದಾಳಿಯಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಮತ್ತು ಮೃತಪಟ್ಟಿದ್ದಾರೆ ಎಂದು ನಿಖರವಾಗಿ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ " ಎಂದು ಕಪೂರ್ ತಿಳಿಸಿದ್ದಾರೆ. 

ವಾಯುಪಡೆಯ ಮುಖ್ಯಸ್ಥರ ಈ ಹೇಳಿಕೆ ಅಷ್ಟಕ್ಕೂ ದಾಳಿಯಲ್ಲಿ 300-400 ಉಗ್ರರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಎಲ್ಲಿಂದ ಹರಡಿತು ಎಂಬ ಬಗ್ಗೆ ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ ಎಂದು ನ್ಯೂಸ್ ಲಾಂಡ್ರಿ ತನ್ನ  ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನಿ ಸೇನೆ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟೀಕರಣ ನೀಡಲು ಕರೆಯಲಾಗಿದ್ದ ಈ ಪತ್ರಿಕಾಗೋಷ್ಟಿಯಲ್ಲಿ, ಭಾರತೀಯ ವಾಯುಪಡೆ ಬುಧವಾರ ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿರುವುದಾಗಿ ಕಪೂರ್ ತಿಳಿಸಿದ್ದಾರೆ. 

ಪಾಕಿಸ್ತಾನದ ಖೈಬರ್ ಫಖ್ತುಂಕ್ವಾ ಪ್ರಾಂತದಲ್ಲಿರುವ ಬಾಲಕೋಟ್ ಸಮೀಪ ನಿಯಂತ್ರಣ ರೇಖೆಯನ್ನು ದಾಟಿದ ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಉಗ್ರರ ಶಿಬಿರಗಳಿಗೆ ದಾಳಿ ಮಾಡಿದ ಸುದ್ದಿ ಹರಡುತ್ತಿದ್ದಂತೆ ಕೆಲವು ಭಾರತೀಯ ಮಾಧ್ಯಮಗಳು ಈ ದಾಳಿಯಲ್ಲಿ ಉಂಟಾಗಿರುವ ಸಾವುನೋವಿನ ಬಗ್ಗೆ ಲೆಕ್ಕಾಚಾರಗಳನ್ನು ನೀಡಲು ಆರಂಭಿಸಿದ್ದವು.

ಕೆಲವು ಮಾಧ್ಯಮಗಳು ಈ ದಾಳಿಯಲ್ಲಿ 200ರಿಂದ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡರೆ ಕೆಲವೊಂದು ಸುದ್ದಿ ವಾಹಿನಿಗಳು 400 ಉಗ್ರರು ಹತರಾಗಿದ್ದಾರೆ ಎಂದು ಪ್ರಸಾರ ಮಾಡಿದ್ದವು. ಜೊತೆಗೆ ವಾಯುಪಡೆಯಿಂದ ಅಧಿಕೃತವಾಗಿ ಯಾವುದೇ ಹೊರಬೀಳದಿದ್ದರೂ ಈ ದಾಳಿಗಳಲ್ಲಿ ಉಗ್ರ ಮಸೂದ್ ಅಝರ್ ಬಾವ ಮೌಲಾನಾ ಯೂಸುಫ್ ಅಝರ್ ಸಾವನ್ನಪ್ಪಿರುವುದಾಗಿ ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News