ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ-ಮೀನಾಕ್ಷಿ ಶಾಂತಿಗೋಡು
ಪುತ್ತೂರು, ಫೆ. 28: ಹೆಣ್ಣು ಮಕ್ಕಳು ಇಂದು ಎಲ್ಲಾ ರಂಗಗಳಲ್ಲಿ ಪ್ರಬುದ್ಧ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ದೌರ್ಜನ್ಯ, ಶೋಷಣೆ ಪ್ರಕರಣಗಳು ನಡೆದಾಗ ಅದನ್ನು ತಡೆಯುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ದ.ಕ. ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಆಶ್ರಯದಲ್ಲಿ ಜಿ.ಪಂ, ತಾ.ಪಂ. ಸದಸ್ಯರಿಗೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಾ.ಪಂ. ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ `ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ' ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಹೆಣ್ಣು ಮಕ್ಕಳು ಸಬಲತೆಯನ್ನು ಸಾಧಿಸಿ ಪ್ರಬಲವಾಗಬೇಕಾದರೆ ಸಮಾಜದ ಕಾಳಜಿಯೂ ಅಗತ್ಯ. ಈ ನಿಟ್ಟಿನಲ್ಲಿ ಹೆಣ್ಣಿಗೆ ಮತ್ತಷ್ಟು ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಬೇಕು ಎಂದರು.
ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಮುಕುಂದ, ಭವಾನಿ ಚಿದಾನಂದ, ಲಲಿತಾ ಈಶ್ವರ್, ತಾ.ಪಂ. ವಿಷಯ ನಿರ್ವಾಹಕ ಶಿವಪ್ರಕಾಶ್ ಅಡ್ಪಂಗಾಯ ಮತ್ತಿತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಅವರು ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ತಡೆ, ಕೌಟುಂಬಿಕ ದೌರ್ಜನ್ಯ ತಡೆ ಕುರಿತು, ತಿಂಗಳಾಡಿ ಪ್ರಾ. ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಪಲ್ಲವಿ ಅವರು ಬ್ರೂಣ ಹತ್ಯೆಯ ಕುರಿತು ಹಾಗೂ ಮಕ್ಕಳ ರಕ್ಷಣಾ ಘಟಕದ ಸಂಯೋಜಕ ವಝೀರ್ ಅಹಮ್ಮದ್ ಅವರು ಮಕ್ಕಳ ರಕ್ಷಣಾ ಘಟಕದ ಕುರಿತು ಮಾಹಿತಿ ನೀಡಿದರು.
ಜಿ.ಪಂ. , ತಾ.ಪಂ., ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಆರೋಗ್ಯ ಮೇಲ್ವಿಚಾರಕರು ಶಿಬಿರಾರ್ಥಿಗಳಾಗಿ ಪಾಲ್ಗೊಂಡರು.
ಸಿಡಿಪಿಒ ಶಾಂತಿ ಹೆಗಡೆ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಜೆ. ವಂದಿಸಿದರು.