ನೆಕ್ಕಿಲಾಡಿ: ಲೈನ್‍ಮ್ಯಾನ್‍ ಬೇಜವಾಬ್ದಾರಿ ವರ್ತನೆ; ನಾಗರಿಕರಿಂದ ಮೆಸ್ಕಾಂಗೆ ಮನವಿ

Update: 2019-02-28 16:43 GMT

ಉಪ್ಪಿನಂಗಡಿ, ಫೆ. 28: 34ನೇ ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಸ್ಕಾಂ ಲೈನ್‍ಮ್ಯಾನ್ ರವೀಂದ್ರ ಎಂಬವರು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದು, ಕೆಲಸದಲ್ಲಿ ಅವರು ಅಸಡ್ಡೆ ತೋರುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಾಗಿದೆ. ಆದ್ದರಿಂದ ಅವರನ್ನು ಕೂಡಲೇ ಇಲ್ಲಿಂದ ಬೇರೆಡೆ ಕಳುಹಿಸಬೇಕೆಂದು 34ನೇ ನೆಕ್ಕಿಲಾಡಿ ನಾಗರಿಕರು ಮೆಸ್ಕಾಂಗೆ ಮನವಿ ನೀಡಿದ್ದಾರೆ.

ಮೆಸ್ಕಾಂನ ಉಪ್ಪಿನಂಗಡಿಯ ಸಹಾಯಕ ಅಭಿಯಂತರರಿಗೆ ಮನವಿ ನೀಡಿರುವ ಅವರು, ಫೆ.26ರಂದು ಸಂಜೆ 34ನೇ ನೆಕ್ಕಿಲಾಡಿ ವ್ಯಾಪ್ತಿಯ ನೆಕ್ಕಲ, ಬೀತಲಪ್ಪು ಪ್ರದೇಶ ವ್ಯಾಪ್ತಿಯ ಟ್ರಾನ್ಸ್ ಫಾರ್ಮರ್ ನಲ್ಲಿ ಫ್ಯೂಸ್ ಹೋಗಿತ್ತು. ಈ ಭಾಗದ ಲೈನ್‍ಮ್ಯಾನ್ ಆದ ರವೀಂದ್ರರವರಿಗೆ ನಾವು ದೂರವಾಣಿ ಕರೆ ಮಾಡಿದಾಗ ಅವರು ಮೊದಲು ಕರೆ ಸ್ವೀಕರಿಸದೇ ಅಸಡ್ಡೆ ತೋರಿದರು. ಪದೇ ಪದೇ ಫೋನ್ ಮಾಡಿದಾಗ ಕರೆ ಸ್ವೀಕರಿಸಿದ ಅವರು ಇವತ್ತು ಆಗುವುದಿಲ್ಲ. ನಾಳೆ ಬೆಳಗ್ಗೆ ನೋಡುವ ಎಂದು ಉಡಾಫೆಯಿಂದ ಉತ್ತರಿಸಿದರು. ಬಳಿಕ ನಾವು ಮೆಸ್ಕಾಂನ ಎಇ ಅವರಿಗೆ ಫೋನ್ ಮಾಡಿ ವಿದ್ಯುತ್ ಸ್ಥಗಿತಗೊಂಡಿರುವ ವಿಷಯ ತಿಳಿಸಿದ್ದು, ಕೂಡಲೇ ಸ್ಪಂದಿಸಿದ ಎಇ ಅವರು ಉಪ್ಪಿನಂಗಡಿಯ ಲೈನ್‍ಮ್ಯಾನ್ ಅವರನ್ನು ಕರೆಯಿಸಿ ಫ್ಯೂಸ್ ಹಾಕಿಸಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿದರು. ರವೀಂದ್ರ ಅವರು ಕೆಲಸದಲ್ಲಿ ಇಂತಹ ಅಸಡ್ಡೆ ತೋರುವುದು ಇದೇ ಮೊದಲ ಬಾರಿಯಲ್ಲ. ಹಲವು ಬಾರಿ ಅವರು ವಿದ್ಯುತ್ ಗ್ರಾಹಕರ ಸಮಸ್ಯೆಗೆ ಸ್ಪಂದಿಸದೇ ಇದೇ ರೀತಿ ಉಡಾಫೆಯ ವರ್ತನೆ ತೋರಿದ್ದಾರೆ. ಇದರಿಂದ ವಿದ್ಯುತ್ ಸ್ಥಗಿತದ ಸಮಸ್ಯೆಯುಂಟಾಗಿ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ಜನಸಾಮಾನ್ಯರಿಗೆ ಉಂಟಾಗುವಂತಾಗಿದೆ. ಇವರಿಂದ ಮೆಸ್ಕಾಂ ಇಲಾಖೆಗೂ ಕೆಟ್ಟ ಹೆಸರು ಬರುವಂತಾಗಿದೆ. ಈ ಮೊದಲು ಇವರು ಉಪ್ಪಿನಂಗಡಿ, ರಾಮನಗರ ಭಾಗದಲ್ಲಿ ಲೈನ್‍ಮ್ಯಾನ್ ಆಗಿದ್ದರು. ಇಲ್ಲಿಯೂ ಕೂಡಾ ಇವರ ಬಗ್ಗೆ ಅಲ್ಲಿನ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು 34ನೇ ನೆಕ್ಕಿಲಾಡಿ ಗ್ರಾಮದ ವ್ಯಾಪ್ತಿಗೆ ಹಾಕಲಾಗಿದೆ. ಇವರು ಬಂದ ಬಳಿಕ ಇಲ್ಲಿನ ವಿದ್ಯುತ್ ಗ್ರಾಹಕರಿಗೆ ಸಮಸ್ಯೆ ತಪ್ಪದಂತಾಗಿದೆ. ಆದ್ದರಿಂದ ಇವರನ್ನು ಕೂಡಲೇ ಇಲ್ಲಿಂದ ಬೇರೆಡೆ ಕಳುಹಿಸಿ, ನಮ್ಮ ಗ್ರಾಮಕ್ಕೆ ಉತ್ತಮ ಸೇವೆ ನೀಡುವ ಲೈನ್‍ಮ್ಯಾನ್ ಅನ್ನು ನೀಡಬೇಕೆಂದು ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.

ಮನವಿ ನೀಡಿದ ನಿಯೋಗದಲ್ಲಿ 34ನೇ ನೆಕ್ಕಿಲಾಡಿಯ ನೆಕ್ಕಲ ನಿವಾಸಿ ಜಯಪ್ರಕಾಶ್ ಶೆಟ್ಟಿ, ಮಾರ್ಕೋ ಮಸ್ಕರೇನ್ಹಸ್, ಬೀತಲಪ್ಪುವಿನ ಪ್ರವೀಣ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News