ತುಳು ಅಕಾಡೆಮಿಯಿಂದ ಪುಸ್ತಕ ಬಹುಮಾನ-ಗೌರವ ಪ್ರಶಸ್ತಿ
ಮಂಗಳೂರು, ಫೆ. 28: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಪುಸ್ತಕ ಬಹುಮಾನ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಮಾ.23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ತುಳು ಸಾಹಿತ್ಯ ಕ್ಷೇತ್ರದಲ್ಲಿ ಲಲಿತಾ ರೈ, ತುಳು ನಾಟಕ ಕ್ಷೇತ್ರದಲ್ಲಿ ರತ್ನಾಕರ ರಾವ್ ಕಾವೂರು ಹಾಗೂ ತುಳು ಸಿನಿಮಾ ಕ್ಷೇತ್ರದಲ್ಲಿ ಎ.ಕೆ.ವಿಜಯ್‌ರಿಗೆ ಅಕಾಡಮಿಯ 2018ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿ ತಲಾ 50 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗನ್ನು ಒಳಗೊಂಡಿರುತ್ತದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಪುಸ್ತ್ತಕ ಬಹುಮಾನಕ್ಕೆ ಶಾಂತಾರಾಮ ವಿ. ಶೆಟ್ಟಿಯವರ ‘ಮಣ್ಣ ಬಾಜನೊ’ ತುಳು ಕವನ ಸಂಕಲನ ಹಾಗೂ ರಾಜಶ್ರೀ ತಾರನಾಥ ರೈ ಪೆರ್ಲ ಅವರ ‘ಕೊಂಬು’ ತುಳು ಕಾದಂಬರಿ ಆಯ್ಕೆಯಾಗಿದೆ. ಈ ಪುಸ್ತಕ ಬಹುಮಾನ ತಲಾ 25 ಸಾವಿರ ರೂ. ನಗದು, ಶಾಲು, ಹಾರ, ಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಬಿ, ಅಕಾಡಮಿಯ ಚಂದ್ರಶೇಖರ ಗಟ್ಟಿ, ಶಿವಾನಂದ ಕರ್ಕೆರ ಉಪಸ್ಥಿತರಿದ್ದರು.