×
Ad

ಆದ್ಯತಾ ಪಟ್ಟಿ ಆಧರಿಸಿ ಭೂಮಿ ಹಂಚಿಕೆಗೆ ಕ್ರಮ: ದ.ಕ. ಜಿಲ್ಲಾಧಿಕಾರಿ

Update: 2019-02-28 22:26 IST

ಮಂಗಳೂರು, ಫೆ. 28: ಡಿಸಿ ಮನ್ನಾ ಭೂಮಿಯನ್ನು ಆದ್ಯತಾ ಪಟ್ಟಿಯನ್ನಿರಿಸಿಕೊಂಡು ಸಮಗ್ರವಾಗಿ ಮಾನದಂಡಗಳನ್ನು ರಚಿಸಿ ಗುರುತಿಸಿಟ್ಟಿರುವ ಜಾಗ ವನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮುಖಂಡರ ಕುಂದುಕೊರತೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಗುರುತಿಸಿ ಮೀಸಲಿರಿಸಿದ ಭೂಮಿ ಅರ್ಜಿ ಸಲ್ಲಿಸಿದರವರಿಗೆಲ್ಲರಿಗೂ ನೀಡಲು ಸಾಕಾಗುತ್ತಿಲ್ಲ. ಹಾಗಾಗಿ ಸಮಗ್ರ ಮಾನದಂಡವನ್ನು ರೂಪಿಸಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿ, ತಲೆಮಾರುಗಳಿಂದಿರುವ ಆಸ್ತಿಗೆ ಖಾತಾ ಮಾಡಿಸಿಕೊಳ್ಳಲು ಪರಿಶಿಷ್ಟರು ಅನುಭವಿಸುತ್ತಿರುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ಕಂದಾಯ ಅದಾಲತ್ ಮಾದರಿಯಲ್ಲಿ ಖಾತಾ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುವುದು ಎಂದರು.

ಭೂಮಿಯು ತಮ್ಮ ಹೆಸರಿನಲ್ಲಿಲ್ಲದ ಕಾರಣಕ್ಕೆ ಹಲವರ ಮನೆಗಳಲ್ಲಿ ಶೌಚಾಲಯಗಳಿಲ್ಲ ಎಂಬ ಮಾಹಿತಿಯು ಲಭ್ಯವಾಗಿದ್ದು, ಸಮೀಕ್ಷೆ ನಡೆಸಿ ಶೌಚಾಲಯ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮುಖಂಡರು ತಮ್ಮ ಹಕ್ಕುಪತ್ರ ನೀಡಿಕೆ ವಿಳಂಬ, ಶೈಕ್ಷಣಿಕ ಸೌಲಭ್ಯ ಮಾಹಿತಿ ಕೊರತೆ, ರಸ್ತೆ ಸಂಪರ್ಕ ಹಾಗೂ ನೆರೆಮನೆಯವರು ನೀಡುತ್ತಿರುವ ಕಿರುಕುಳದಂತಹ ಸಮಸ್ಯೆಗಳನ್ನು ಹೇಳಿಕೊಂಡರು.

ನಿಗದಿತ ಸಮಸ್ಯೆಗಳನ್ನು ಸ್ಥಳದಲ್ಲೇ ವಿಚಾರಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲು ಮಾಡುವ ಬಗ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ವೇದಮೂರ್ತಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರಲ್ಲದೆ, ಕೆಲವು ನಿರ್ದಿಷ್ಟ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುವುದಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಸ್ತಾಪವಾದ ಕಿರುಕುಳ ಪ್ರಕರಣಗಳ ಮಾಹಿತಿ ಪಡೆದ ಡಿಸಿಪಿ ಹನುಮಂತರಾಯ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಚಿಸಿದರು.

ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸಿಯು ಕೊರತೆಯನ್ನು ಸಭೆಯ ಮುಂದಿಟ್ಟವರಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 30 ಕೋ.ರೂ.ಗಳನ್ನು ಬಳಸಿಕೊಂಡು 34 ಬೆಡ್‌ಗಳನ್ನು ಹೊಂದಿದ ಐಸಿಯು ಕೊಠಡಿ ನಿರ್ಮಿಸಲಾಗುವುದಲ್ಲದೆ ಆಪರೇಷನ್ ಥಿಯೇಟರ್‌ನ್ನು ಹೊಸದಾಗಿ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾವಂತ ಯುವಕ ಯುವತಿಯರಿಗೆ ಐಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಿಎಸ್‌ಆರ್ ನಿಧಿಯಿಂದ ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕ ಕೇಂದ್ರ ಪ್ರಾರಂಭ ಮಾಡುವ ಯೋಜನೆ ಹಾಕಲಾಗುವುದು. ಅಲ್ಲದೆ ವಿದ್ಯಾವಂತ ಯುವಕರಿಗೆ ಕೌಶಲ್ಯಾಭಿವೃದ್ಧಿ ಕಲಿಕೆಗೂ ಸೇರ್ಪಡೆಗೊಳಿಸಲು ಪ್ರೋತ್ಸಾಹ ನೀಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿಪ್ರಸಾದ್, ಜಿಪಂ ಉಪಕಾರ್ಯದರ್ಶಿ ಮಹೇಶ್, ಸಮಾಜ ಕಲ್ಯಾಣಾಧಿಕಾರಿ ಯೋಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News