ಸೆರೆಯಾಗುವವರೆಗೂ ಅಪ್ರತಿಮ ಹೋರಾಟ ನಡೆಸಿದ್ದ ಪೈಲಟ್ ಅಭಿನಂದನ್

Update: 2019-02-28 17:22 GMT

ಹೊಸದಿಲ್ಲಿ, ಫೆ. 28: ಐಎಎಫ್‌ನ ಕೆಚ್ಚೆದೆಯ ಧೀರ ಅಭಿನಂದನ್ ವರ್ಧಮಾನ್ ಸುರಕ್ಷಿತವಾಗಿ ಹಿಂದಿರುಗುವಂತೆ ದೇಶ ಪ್ರಾರ್ಥಿಸುತ್ತಿರುವಾಗ, ನಮ್ಮ ಪೈಲಟ್ ಆತಂಕಕ್ಕೊಳಗಾಗದೆ, ಸ್ಥಿಮಿತ ಕಳೆದುಕೊಳ್ಳದೆ, ಗಂಭೀರ ಅಪಾಯವನ್ನು ಹೇಗೆ ಎದುರಿಸಿದರು ಎಂಬುದನ್ನು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಅಭಿನಂದನ್ ಸೆರೆಯಾಗುವ ಮುನ್ನ ಹೋರಾಡಿದ್ದರು, ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೂ ಪ್ರಮುಖ ದಾಖಲೆಗಳನ್ನು ನುಂಗಿದ್ದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ವಿಮಾನ ಪತನದಿಂದ ಗಾಯಗೊಂಡು ರಕ್ತ ಸುರಿಯುತ್ತಿರುವಂತೆ ಇದೆಲ್ಲವನ್ನೂ ಮಾಡಿದ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪೈಲಟ್‌ ಬಳಿ ಪಿಸ್ತೂಲು ಇತ್ತು. ಇದು ಭಾರತ ಅಥವಾ ಪಾಕಿಸ್ತಾನವೇ ಎಂದು ಅವರು ಓರ್ವ ಯುವಕರೊಂದಿಗೆ ಕೇಳಿದರು. ಆ ಯುವಕ ಬುದ್ಧಿವಂತಿಕೆ ಉಪಯೋಗಿಸಿ ‘ಇದು ಭಾರತ’ ಎಂದ. ಆನಂತರ ಅಭಿನಂದನ್ ಎಂದು ಗುರುತಿಸಲಾದ ಈ ಪೈಲಟ್ ಕೆಲವು ಘೋಷಣೆಗಳನ್ನು ಕೂಗಿದರು. ಇದು ಭಾರತದ ಯಾವ ಸ್ಥಳ ಎಂದು ಪ್ರಶ್ನಿಸಿದರು. ಇದಕ್ಕೆ ಕೆಲವು ಬಾಲಕರು ಪ್ರತಿಕ್ರಿಯಿಸಿ ‘ಇದು ಖಿಲ್ಲಾ’ ಎಂದರು ಎಂದು ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದೆ.

ಈ ಪೈಲಟ್ ತನ್ನ ಬೆನ್ನಿಗೆ ಘಾಸಿಯಾಗಿದೆ ಹಾಗೂ ನೀರು ಬೇಕು ಎಂದು ಕೇಳಿದ್ದರು. ಈ ಸಂದರ್ಭ ಕೆಲವು ಯುವಕರು ‘ಪಾಕಿಸ್ತಾನ್ ಸೇನೆ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದರು. ಇದಕ್ಕೆ ಅಭಿನಂದನ್ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಸಂದರ್ಭ ಬಾಲಕರು ಕಲ್ಲು ಎತ್ತಿಕೊಂಡರು. ಭಾರತದ ಪೈಲಟ್ ಬಾಲಕರಿಗೆ ಪಿಸ್ತೂಲು ತೋರಿಸಿ ಅರ್ಧ ಕಿ.ಮೀ. ವರೆಗೆ ಓಡಿಸಿದರು ಎಂದು ರಝಾಕ್ ಎಂಬವರು ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ.

ಈ ಅಪಾಯದ ಸನ್ನಿವೇಶದಲ್ಲಿ ಅವರು ಬಾಲಕರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಅವರು ತಿಳಿಸಿದ್ದಾರೆ. ಆನಂತರ ಅವರು ಸಣ್ಣ ಹೊಂಡವೊಂದಕ್ಕೆ ಹಾರಿದರು. ತನ್ನ ಕಿಸೆಯಲ್ಲಿ ಇದ್ದ ದಾಖಲೆಗಳು ಹಾಗೂ ನಕಾಶೆಗಳನ್ನು ನುಂಗಿದರು ಹಾಗೂ ನೀರಲ್ಲಿ ಅದ್ದಿದರು. ಪಿಸ್ತೂಲು ಕೆಳಗಿರಿಸುವಂತೆ ಬಾಲಕನೋರ್ವ ಹೇಳಿದ. ಈ ನಡುವೆ ಅವರು ಓರ್ವ ಬಾಲಕನ ಕಾಲಿಗೆ ಗುಂಡು ಹಾರಿಸಿದರು ಎಂದು ರಝಾಕ್ ತಿಳಿಸಿದ್ದಾರೆ.

ಅಭಿನಂದನ್ ಅವರ ಎರಡೂ ಕೈಗಳನ್ನು ಬಾಲಕರು ಹಿಡಿದುಕೊಂಡರು. ಕೆಲವರು ಅವರೊಂದಿಗೆ ಕಠಿಣವಾಗಿ ವರ್ತಿಸಿದರು. ಆಕ್ರೋಶ ವ್ಯಕ್ತಪಡಿಸಿದರು. ಇತರರು ಆಕ್ರೋಶಿತರನ್ನು ಸಮಾಧಾನಪಡಿಸಿದರು. ಈ ನಡುವೆ ಸೇನಾ ಸಿಬ್ಬಂದಿ ಆಗಮಿಸಿದರು. ಅವರನ್ನು ವಶಕ್ಕೆ ತೆಗೆದುಕೊಂಡರು ಎಂದು ಡಾನ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News