ಕೋಟೆಪುರ ನವೀಕೃತ ಜುಮಾ ಮಸೀದಿ ಉದ್ಘಾಟನೆ
ಉಳ್ಳಾಲ, ಫೆ. 28: ಕೋಟೆಪುರ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಇದರ ಅಧೀನದಲ್ಲಿ ಪುನರ್ ನಿರ್ಮಾಣಗೊಂಡ ಮಸೀದಿಯ ಉದ್ಘಾಟನೆ ಗುರುವಾರ ನಡೆಯಿತು.
ಸಮಸ್ತ ಕೇರಳ ಜಮೀಯತ್ತುಲ್ ಉಲಮಾ ಮುಶಾವರ ಸದಸ್ಯರಾದ ಶೈಖುನಾ ಅಲ್-ಹಾಜ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಅವರು ಮಾತನಾಡಿ, ಮಸೀದಿಗಳು ಸಮಸ್ಯೆ ಸೃಷ್ಟಿಸುವ ಕೇಂದ್ರವಲ್ಲ. ಶಾಂತಿ, ಸೌಹಾರ್ದತೆ ಸೃಷ್ಟಿಸುವ ಕೇಂದ್ರಗಳಾಗಿವೆ. ಯಾವುದೇ ಒಂದು ಪ್ರದೇಶದ ಜನರು ಮಸೀದಿಯ ಖತೀಬ್, ಆಡಳಿತ ಸಮಿತಿಯೊಂದಿಗೆ ಮುನ್ನಡೆದಾಗ ಯಾವುದೇ ರೀತಿಯ ಸಮಸ್ಯೆ ಸೃಷ್ಟಿಯಾಗದು ಎಂದು ಹೇಳಿದರು.
ಮಸೀದಿ ಆವರಣದಲ್ಲಿ ಅಳವಡಿಸಲಾಗಿರುವ ಇಂಟರ್ ಲಾಕ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಒಂದು ಪ್ರದೇಶ ಅಭಿವೃದ್ಧಿ ಹೊಂದಬೇಕಾದರೆ ಆ ಪ್ರದೇಶದಲ್ಲಿರುವ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಬೇಕು. ಕೋಟೆಪುರ ಜುಮಾ ಮಸೀದಿ ಅಭಿವೃದ್ಧಿಗೊಂಡಿ ರುವುದರಿಂದ ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿರುವ ಪ್ರತಿಯೊಂದು ಮನೆಯಲ್ಲೂ ಸರ್ಕಾರಿ ಮಟ್ಟದ ಅಧಿಕಾರಿಗಳು ಸೃಷ್ಟಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಉಳ್ಳಾಲ ಸಹಾಯಕ ಖಾಝಿ ಅಲ್-ಹಾಜ್ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಫ್ ಅಧ್ಯಕ್ಷ ಯು.ಕೆ.ಮೋನು, ಮಸೀದಿಯ ಅಧ್ಯಕ್ಷ ಯು.ಕೆ.ಅಬ್ಬಾಸ್, ದರ್ಗಾ ಪದಾಧಿಕಾರಿಗಳಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಮೊಹಮ್ಮದ್ ತ್ವಾಹ, ಹಿರಿಯ ವಿದ್ವಾಂಸ ಅಲ್-ಹಾಜ್ ಅಹ್ಮದ್ ಬಾವ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಕೋಟೆಪುರ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಮದನಿ, ಮುಹಮ್ಮದ್ ಶರೀಫ್ ಮದನಿ, ಹುಸೈನ್ ಇರ್ಶಾದ್ ಸಖಾಫಿ, ಯು.ಎನ್.ಅಬ್ದುಲ್ ರಝಾಕ್, ಯು.ಕೆ.ಇಲ್ಯಾಸ್, ಯು.ಟಿ.ಇಲ್ಯಾಸ್, ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಕೌನ್ಸಿಲರ್ ಅಯೂಬ್ ಮಂಚಿಲ ಇನ್ನಿತರರು ಉಪಸ್ಥಿತರಿದ್ದರು.
ಮಾಜಿ ಕೌನ್ಸಿಲರ್ ಎ.ಕೆ.ಮೊಯಿದ್ದೀನ್ ಸ್ವಾಗತಿಸಿದರು. ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
'ಮಸೀದಿ ನಿರ್ಮಾಣದ ಪ್ರತಿಫಲ ಸ್ವರ್ಗದಲ್ಲಿ ಸಿಗುತ್ತದೆ ಎನ್ನುವುದು ಪ್ರವಾದಿ(ಸ) ಅವರ ಸಂದೇಶವಾಗಿದೆ. ದೇವನ ಭವನವಾಗಿರುವ ಮಸೀದಿ ನಿರ್ಮಾಣ, ಸೌಂದರ್ಯಕರಣದ ಸಂದರ್ಭ ತೋರುವ ಉತ್ಸಾಹ ಮುಂದಿನ ದಿನಗಳಲ್ಲೂ ಇರಬೇಕಾಗಿದೆ. ಮಸೀದಿಯಲ್ಲಿ ನಿರಂತರ ಧಾರ್ಮಿಕ ಕಾರ್ಯಗಳು ನಡೆಯುತ್ತಿರಬೇಕು'
- ಕೆ.ಎಸ್.ಆಟಕೋಯ ತಂಙಳ್, ಸಮಸ್ತ ಮುಶಾವರ ಸದಸ್ಯರು