×
Ad

ಅಕ್ರಮ ಮರಳುಗಾರಿಕೆ, ಮಟ್ಕಾ ವಿರುದ್ಧ ವಿಶೇಷ ತಂಡ ರಚನೆ: ಎಸ್ಪಿ ನಿಶಾ ಜೇಮ್ಸ್

Update: 2019-03-01 16:37 IST

ಉಡುಪಿ, ಮಾ.1: ಅಕ್ರಮ ಮರಳುಗಾರಿಕೆ, ಮಟ್ಕಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬೈಂದೂರು, ಶಂಕರನಾರಾಯಣ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಕೋಟ ಹಾಗೂ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಕಡೆಗಳಲ್ಲಿ ನಡೆಯುತ್ತಿರುವ ಮಟ್ಕಾ ಕುರಿತು ಸಾರ್ಜನಿಕರಿಂದ ದೂರುಗಳು ಬಂದವು.

ಇದಕ್ಕೆ ಪ್ರತ್ರಿಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ, ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಮಟ್ಕಾ ಸೇರಿದಂತೆ ಇತರ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ವರದಿ ನೀಡುವ ಜವಾ ಬ್ದಾರಿ ಆಯಾ ಠಾಣೆಯ ಬೀಟ್ ಪೊಲೀಸರದ್ದಾಗಿದೆ. ಅವುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪರಿಣಾಮಕಾರಿಯಾಗಿ ಕಾನೂನು ಕ್ರಮ ಜರಗಿಸದಿ ದ್ದರೆ ಹಾಗೂ ಅಂತಹ ಅಕ್ರಮಗಳ ಕುರಿತು ನಿರಂತರ ದೂರುಗಳು ಬಂದರೆ ಜಿಲ್ಲಾ ಮಟ್ಟದ ತಂಡವೇ ಅದರ ವಿರುದ್ಧ ಕಾರ್ಯಾಚರಣೆಗೆ ಇಳಿಯಲಿದೆ ಎಂದರು.

ಹೊಸ ಕಾನೂನು ಪ್ರಕಾರ ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸ್ ಇಲಾಖೆ ನೇರವಾಗಿ ಪ್ರಕರಣ ದಾಖಲಿಸಲು ಅಧಿಕಾರ ಇಲ್ಲ. ಆದುದರಿಂದ ಈ ಕುರಿತು ಮಾಹಿತಿ ಬಂದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆಗಳ ಸಹಕಾರದೊಂದಿಗೆ ದಾಳಿ ನಡೆಸಲಾಗುತ್ತದೆ. ಆ ಕುರಿತು ಭೂ ವಿಜ್ಞಾನಿಗಳು ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಅಧಿಕಾರಿಗಳು ನೀಡುವ ದೂರಿನಂತೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸಂಚಾರ ಸಮಸ್ಯೆ ದೂರುಗಳು: ರಾಷ್ಟ್ರೀಯ ಹೆದ್ದಾರಿಯ 66ರ ಸರ್ವಿಸ್ ರಸ್ತೆಯಲ್ಲಿ ವಾಹನಗಳನ್ನು ದುರಸ್ಥಿಗೊಳಿಸುವುದು ಮತ್ತು ಸರ್ವಿಸ್ ರಸ್ತೆಯಲ್ಲಿ ಅತೀವೇಗದಿಂದ ವಾಹನ ಚಲಾಯಿಸುವುದು, ಕಾರ್ಕಳ ಗ್ರಾಮಾಂತರ ವ್ಯಾಪ್ತಿ ಯಲ್ಲಿ ಅತೀವೇಗದ ವಾಹನ ಚಾಲನೆ ಮತ್ತು ಕುಡಿದು ವಾಹನ ಚಲಾಯಿಸು ವುದು, ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಬಸ್‌ಗಳನ್ನು ನಿಲ್ದಾಣ ಹೊರತುಪಡಿಸಿ ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಇತರ ವಾಹನಗಳಿಗೆ ತೊಂದರೆ ಆಗುತ್ತಿರುವ ಕುರಿತು ದೂರುಗಳು ಬಂದವು.

ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್, ಕುಂದಾಪುರದಲ್ಲಿ ಲಾರಿಗಳಲ್ಲಿ ಹೊದಿಕೆಯನ್ನು ಹಾಕದೆ ಮಣ್ಣುಗಳ ಸಾಗಾಟ, ಉದ್ಯಾವರ ಬಲಾಯಿಪಾದೆ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾ ಯಿಸುವುದು, ನಗರದಲ್ಲಿ ನಿಲ್ದಾಣವಲ್ಲದ ಸ್ಥಳಗಳಲ್ಲಿ ಬಸ್ ನಿಲುಗಡೆ, ಬಸ್‌ಗಳ ಒಳಗಡೆ ವಾಹನಗಳ ನಂಬರ್ ಪ್ರದರ್ಶನಕ್ಕೆ ಕ್ರಮ ಜರಗಿಸುವಂತೆ ಸಾರ್ವ ಜನಿಕರು ಕರೆ ಮಾಡಿದರು. ಈ ಎಲ್ಲ ದೂರುಗಳಿಗೆ ಸ್ಪಂದಿಸಿದ ಎಸ್ಪಿ ಪರಿಶೀಲಿಸಿ ಕ್ರಮ ಜರಗಿಸುವುದಾಗಿ ತಿಳಿಸಿದರು.

ಅನ್ನಭಾಗ್ಯದ ಅಕ್ಕಿ ಮಾರಾಟ: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಉಚಿತ ವಾಗಿ ಸಿಗುವ ಅನ್ನಭಾಗ್ಯದ ಅಕ್ಕಿಗಳನ್ನು ಫಲಾನುಭವಿಗಳು ಹಣಕ್ಕಾಗಿ ಗುಜರಿಯವರಿಗೆ ಮಾರಾಟ ಮಾಡುವ ಕುರಿತು ಸ್ಥಳೀಯರೊಬ್ಬರು ಕರೆ ಮಾಡಿ ಮಾಹಿತಿ ನೀಡಿದರು.

ಮಲ್ಪೆ ಹಾಸ್ಟೆಲ್ ಬಳಿ ಇರುವ ವೈನ್ ಸ್ಟೋರ್‌ನಲ್ಲಿ ಮದ್ಯವನ್ನು ಬಿಡಿಯಾಗಿ ವಿತರಣೆ, ನಗರದ ಬೀಡಿನಗುಡ್ಡೆ ಸಮೀಪದ ಗೂಡಂಗಡಿಗಳಲ್ಲಿ ವಿದ್ಯಾರ್ಥಿ ಗಳಿಗೆ ಬೀಡಿ ಸಿಗರೇಟ್ ಮಾರಾಟ, 2016ರಲ್ಲಿ ವರದಿಯಾದ ಸುಲಿಗೆ ಪ್ರಕರಣ ಸರಿಯಾಗಿ ತನಿಖೆ ಆಗದಿರುವ ಬಗ್ಗೆ ಆಕ್ಷೇಪ, ಕೈ ಸಾಲವನ್ನು ಹಿಂತಿ ಗುರಿಸದೆ ಬೆದರಿಕೆ, ಬಸ್ ನಿರ್ವಾಹಕನಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಕುರಿತು ದೂರುಗಳು ಬಂದವು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ಸೆನ್ ಅಪರಾಧ ಠಾಣೆಯ ನಿರೀಕ್ಷಕ ಸೀತಾರಾಮ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್ ಗುನಗ, ನಗರ ಸಂಚಾರ ಠಾಣಾಧಿಕಾರಿ ನಿತ್ಯಾನಂದ ಗೌಡ, ಡಿಸಿಐಬಿ ಪೊಲೀಸ್ ನಿರೀಕ್ಷಕ ಕಿರಣ್, ಕಾರ್ಕಳ ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಉಪಸ್ಥಿತರಿದ್ದರು.

ಗ್ರಾಪಂ ಅಧ್ಯಕ್ಷರ ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್ !

ಬಿಲ್ಲಾಡಿ ಗ್ರಾಪಂ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ತನ್ನ ಮಾರುತಿ ಟ್ರೀಝಾ ಕಾರಿಗೆ ಸಂತೋಷ್ ಶೆಟ್ಟಿ ಎಂಬವರ ಮಾರುತಿ ಇಕೋ ಕಾರಿನ ನೋಂದಾವಣಿ ನಂಬರ್ ಪ್ಲೇಟ್‌ನ್ನು ಹಾಕಿಕೊಂಡು ಕಳೆದ ಒಂದು ವರ್ಷದಿಂದ ಕಾರಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಗ್ರಾಮ್ಥರೊಬ್ಬರು ಕರೆ ಮಾಡಿ ದೂರಿದರು.

ಬಳಿಕ ಎಸ್ಪಿ ಕಚೇರಿಗೆ ಆಗಮಿಸಿದ ಬಿಲ್ಲಾಡಿ ಗ್ರಾಪಂ ಮಾಜಿ ಅಧ್ಯಕ್ಷ ಎನ್. ನವೀನ್ ಚಂದ್ರ ಶೆಟ್ಟಿ ನೇತೃತ್ವದ ನಿಯೋಗ ಎಸ್ಪಿಯನ್ನು ಭೇಟಿ ಮಾಡಿ ಈ ಕುರಿತು ದೂರನ್ನು ನೀಡಿತು. ಇದಕ್ಕೆ ಸ್ಪಂದಿಸಿದ ಎಸ್ಪಿ ಈ ಕುರಿತು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.

ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆ

ಉಡುಪಿ ಜಿಲ್ಲೆಯಾದ್ಯಂತ ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾ ಚರಣೆ ನಡೆಸಿ 520 ಖಾಸಗಿ ಬಸ್ ಸಹಿತ ವಾಹನಗಳಿಗೆ ದಂಡ ವಿಧಿಸಿ ಹಾರ್ನ್ ತೆಗೆಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಕಳೆದ ಮೂರು ವಾರಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ 5 ಮಟ್ಕಾ ಪ್ರಕರಣಗಳಲ್ಲಿ 5, 4 ಜೂಜಾಟ ಪ್ರಕರಣಗಳಲ್ಲಿ 26, ಅಕ್ರಮ ಮದ್ಯ ಪ್ರಕರಣ ಗಳಲ್ಲಿ 3, 8 ಗಾಂಜಾ ಸೇವನೆಗೆ ಎಂಟು ಮಂದಿ ಬಂಧಿಸಲಾಗಿದೆ. ಉಳಿದಂತೆ 109 ಕೋಟ್ಪಾ, 35 ಕುಡಿದು ವಾಹನ ಚಾಲನೆ, 132 ಮೊಬೈಲ್ ಬಳಸಿ ವಾಹನ ಚಾಲನೆ, 3249 ಹೆಲ್ಮೆಟ್ ಧರಿಸದೆ ವಾಹನ ಚಾಲನೆ, 140 ಅತಿ ವೇಗದ ಚಾಲನೆ, 7001 ಇತರ ಮೋಟಾರು ಕಾಯಿದೆ ಉಲ್ಲಂಘನೆ ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News