×
Ad

ಕಾವೇರಿ ನದಿ ಸಂರಕ್ಷಣೆಗೆ ಯೋಜನೆ ರೂಪಿಸಲು ಸಿಎಂಗೆ ಮನವಿ

Update: 2019-03-01 17:45 IST

ಮಡಿಕೇರಿ,ಮಾ.1: ಕಾವೇರಿ ನದಿ ಸಂರಕ್ಷಣೆಗೆ ಸರಕಾರದ ಮೂಲಕ ನದಿ ತಟಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ರಾಜ್ಯ ಸರಕಾರ ವಿಶೇಷ ಅನುದಾನ ಕಲ್ಪಿಸುವಂತೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಪ್ರಮುಖರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಗೆ ಭೇಟಿ ನೀಡಿ ಕುಶಾಲನಗರ ಮೂಲಕ ಮೈಸೂರಿಗೆ ತೆರಳುವ ಸಂದರ್ಭ ಕೊಪ್ಪ ಮಿನಿಸ್ಟರ್ ಕೋರ್ಟ್ ಹೋಟೆಲ್‍ನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಮಿತಿಯ ಪ್ರಮುಖರು ಜೀವನದಿ ಕಾವೇರಿ ಸಂರಕ್ಷಣೆ ಬಗ್ಗೆ ಸರಕಾರ ಕಾಳಜಿ ವಹಿಸಬೇಕು. ನದಿಗಳ ಸಂರಕ್ಷಣೆಗೆ ರಾಜ್ಯದಲ್ಲಿ ಕಾನೂನು ರೂಪಿಸಿ ಅನುಷ್ಠಾನಗೊಳಿಸಬೇಕು. ಕುಶಾಲನಗರ-ಮಡಿಕೇರಿ ಒಳಚರಂಡಿ ಯೋಜನೆ ಕಾಮಗಾರಿ ಕೂಡಲೆ ಪೂರ್ಣಗೊಳಿಸುವುದರೊಂದಿಗೆ ಸ್ವಚ್ಚ ಕೊಡಗು ಹಾಗೂ ಸ್ವಚ್ಚ ಕಾವೇರಿಗೆ ಆದ್ಯತೆ ನೀಡಬೇಕು. ನದಿ ತಟಗಳ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ದಿಪಡಿಸುವುದು, ನದಿ ತಟಗಳ ವ್ಯಾಪ್ತಿಯ ಗ್ರಾಮಪಂಚಾಯ್ತಿಗಳ ಹಾಗೂ ಪಟ್ಟಣಗಳ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಸದಂತೆ ಯೋಜನೆ ರೂಪಿಸುವುದು, ಪ್ರವಾಸಿ ಕೇಂದ್ರಗಳಿಗೆ ಕಾವೇರಿ ನದಿಯಿಂದಲೇ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕ್ರಮಕೈಗೊಳ್ಳುವ ಮೂಲಕ ಬಾಟಲಿ ನೀರಿಗೆ ನಿರ್ಭಂದ ಹೇರುವುದು, ನದಿ ವ್ಯಾಪ್ತಿಯ ಸರ್ವೆ ಕಾರ್ಯ ನಡೆಸಿ ನದಿಯ ಮೂಲ ಅಸ್ತಿತ್ವವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು. ಕುಶಾಲನಗರ ನೂತನ ತಾಲೂಕು ಘೋಷಣೆ ಮಾಡಿದ ಮುಖ್ಯಮಂತ್ರಿಗಳನ್ನು ಸಮಿತಿಯ ಪ್ರಮುಖರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೂತನ ಯೋಜನೆಗಳನ್ನು ರೂಪಿಸಲಾಗುವುದು, ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಉದ್ಯಮಿ ರಘು ಅವರಿಗೆ ಭರವಸೆ ನೀಡಿದರು. ಇದೇ ಸಂದರ್ಭ ಕುಶಾಲನಗರದ ಜೆಡಿಎಸ್ ಪ್ರಮುಖರಾದ ಹೆಚ್.ಟಿ.ವಸಂತ್, ಎಚ್.ಜೆ.ಸಂತೋಷ್, ಎಚ್.ಎಂ. ಚಂದ್ರು, ಜಕ್ರಿಯ, ಕಮರ್, ಕೆ.ಎಚ್.ಅಯೂಬ್ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಗೌರವಿಸಿದರು.

ಶಾಸಕ ಕೆ.ಮಹದೇವ್, ಜಿಪಂ ಸದಸ್ಯ ರಾಜೇಂದ್ರ, ಉದ್ಯಮಿ ಎಂ.ಎ.ರಘು, ಸ್ವಚ್ಚತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೆ.ಆರ್.ಶಿವಾನಂದನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಅಕ್ಷಯ್‍ಗೌಡ, ಸ್ಥಳೀಯ ಪ್ರಮುಖರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News