ಮನಪಾ ವ್ಯಾಪ್ತಿಯಲ್ಲಿ ಅಮೃತ ಯೋಜನೆಯ 186 ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ
ಮಂಗಳೂರು, ಮಾ.1: ಮಂಗಳೂರು ಮಹಾನಗರ ಪಾಲಿಕೆಯ ನೇತೃತ್ವದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಪುರಸ್ಕೃತ ಅಮೃತ ಯೋಜನೆಯ 186 ಕೋಟಿ ರೂ.ಗಳ ವಿವಿಧ ಕಾಮಗಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ನಗರದ ಕದ್ರಿ ಪಾರ್ಕ್‌ನಲ್ಲಿಂದು ಉದ್ಘಾಟಿಸಿ ಶುಭ ಹಾರೈಸಿದರು.
ಕೇಂದ್ರ ಸರಕಾರದಿಂದ ಶೇ. 50, ರಾಜ್ಯ ಸರಕಾರದಿಂದ ಶೇ. 20 ಮತ್ತು ಮಹಾನಗರ ಪಾಲಿಕೆಯಿಂದ ಶೇ. 30ರ ಅನುದಾನದಿಂದ ಅನುಷ್ಠಾನಗೊಳ್ಳುವ ಅಮೃತ ಯೋಜನೆಯಲ್ಲಿ ಹಮ್ಮಿಕೊಂಡಿರುವ 179.52 ಕೋಟಿ ರೂಗಳ ಒಳಚರಂಡಿ ಯೋಜನೆ, 4 ಕೋಟಿ ರೂ ವೆಚ್ಚದ ಮಳೆ ನೀರ ಚರಂಡಿ ಯೋಜನೆ ಹಾಗೂ 2 ಕೋಟಿ ರೂ ವೆಚ್ಚದಲ್ಲಿ ಸುರತ್ಕಲ್, ಕುಂಜತ್ತಬೈಲ್, ಕೃಷ್ಣಾಪುರ ಮತ್ತು ಕದ್ರಿ ಪಾರ್ಕ್ ಅಭಿವೃದ್ಧಿ ಯೋಜನೆಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಮೃತ ಯೋಜನೆಯನ್ನು ಮತ್ತು ಸ್ಮಾರ್ಟ್ ಸಿಟಿ ಎರಡನ್ನು ಪಡೆದಿರುವ ದೇಶದ ಮಹಾನಗರ ಪಾಲಿಕೆ ಮಂಗಳೂರು ಎನ್ನುವುದು ಸಂತಸದ ಸಂಗತಿಯಾಗಿದೆ. ದೇಶದ ಪ್ರಧಾನಿಯ ದೂರದೃಷ್ಟಿಯ ಫಲವಾಗಿ ಸ್ಮಾರ್ಟ್ ಸಿಟಿ ಯೋಜನೆ ಭವಿಷ್ಯದಲ್ಲಿ ಜನತೆಗೆ ಇನ್ನಷ್ಟು ಸಹಾಯವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಂತೂರು, ಕೆಪಿಟಿ ಫ್ಲೈ ಓವರ್ ಕಾಮಗಾರಿಗೆ ಅನುಮತಿ
ರಾಷ್ಟ್ರೀಯ ಹೆದ್ದಾರಿಯ ನಂತೂರು, ಕೆಪಿಟಿ ಬಳಿ ಬೇಡಿಕೆ ಇರುವ ಫ್ಲೈ ಓವರ್ ಕಾಮಗಾರಿಗೆ ಸರಕಾರ ಅನುಮತಿ ನೀಡಿದೆ ಡಿಪಿಆರ್ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿ.ಸಿ ರೋಡ್ -ಪಣಂಬೂರು ಅಷ್ಟಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಸರಕಾರ ಅನಮಮತಿ ನೀಡಿದೆ. ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ವಿಶ್ವ ದರ್ಜೆಯ ರೈಲು ನಿಲ್ದಾಣವಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವ ಯೋಜನೆ ಸರಕಾರ ಹಮ್ಮಿಕೊಂಡಿದೆ ಎಂದು ಸಂದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಜನ ಸಾಮಾನ್ಯರ ಪಾರ್ಕ್ ಎಂದು ಖ್ಯಾತಿ ಪಡೆದಿರುವ ಕದ್ರಿ ಪಾರ್ಕ್‌ನಲ್ಲಿ ಇನ್ನಷ್ಟು ಅನುಕೂಲ ಕಲ್ಪಿಸಲು ಮುಕ್ತ ಜಿಮ್‌ನ ಸಲಕರಣೆಗಳನ್ನು ಅಳವಡಿಸುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕದ್ರಿ ಪಾರ್ಕ್‌ನ ವಿಸ್ತರಣೆ ಯೋಜನೆ
ಕದ್ರಿ ಪಾರ್ಕ್‌ನ್ನು ಇನ್ನಷ್ಟು ವಿಸ್ತರಣೆ ಮಾಡುವುದರೊಂದಿಗೆ ಅದನ್ನು ಅಭಿವೃದ್ಧಿಪಡಿಸಲು ಸ್ಕೇಟಿಂಗ್ ಸರ್ಕಲ್ ಮತ್ತು ಪಾರ್ಕ್ ನಡುವೆ ಇರುವ ಹೆದ್ದಾರಿಯ ಕೆಳಗೆ ಸುರಂಗ ಮಾರ್ಗ್‌ವನ್ನು ಕೊರೆದು ಅಭಿವೃದ್ಧಿ ಪಡಿಸುವ ಯೋಜನೆಯ ಬಗ್ಗೆ ಚಿಂತನೆ ನಡೆಸಿರುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಸರಕಾರದ ಯಾವೂದೇ ಯೋಜನೆಗಳನ್ನು ಉತ್ತಮ ವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವುದು ನಮ್ಮ ಹೊಣೆಗಾರಿಕೆ. ಅದರಲ್ಲಿ ನಾವು ಯಾರು ರಾಜಕೀಯ ಮಾಡಬಾರದು. ಕೇಂದ್ರ, ರಾಜ್ಯ ಸರಕಾರದ ಯೋಜನೆ ಎಂದು ವಿಭಾಗ ಮಾಡಬಾರದು ಯೋಜನೆಗಳನ್ನು ಜನರಿಗೆ ತಲುಪಿಸಲು ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಜನಪ್ರತಿನಿಧಿಗಳು ಭಾವಿಸಿ ಕಾರ್ಯನಿರ್ವಹಿಸಬೇಕು. ಮಂಗಳೂರು ಮಹಾ ನಗರ ಪಾಲಿಕೆ ಈ ರೀತಿಯ ಸಂಪ್ರದಾಯದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಕದ್ರಿ ಪಾರ್ಕ್‌ನಲ್ಲಿ 23 ಜಿಮ್ ಸಲಕರಣೆಗಳನ್ನು ಪಾರ್ಕ್‌ಗೆ ಬರುವವರ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯೊಂದ ಅಳವಡಿಸಲಾಗಿದೆ. ಜೊತೆಗೆ ಒಟ್ಟು 116 ಲಕ್ಷ ರೂ.ಗಳ ವಿವಿಧ ಯೋಜನೆಗಳನ್ನು ಕದ್ರಿ ಪಾರ್ಕ್‌ನಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಮನಪಾ ಮೇಯರ್ ಭಾಸ್ಕರ್ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವಾ, ನವೀನ್ ಡಿ ಸೋಜ, ರಾಧಾಕೃಷ್ಣ, ಪ್ರೇಮಾನಂದ ಶಟ್ಟಿ, ರೂಪಾ ಡಿ ಬಂಗೇರಾ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್, ಇಂಜಿನಿಯರ್ ರಂಗನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರರಾದ ಝಾಕಿರ್ ಹುಸೈನ್ ಹಾಗೂ ತಾಂತ್ರಿಕ ವಿನ್ಯಾಸಕಾರರಾದ ವೆಂಕಟೇಶ್ ಪೈ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.