×
Ad

ಕಾನೂನು ಉಲ್ಲಂಘನೆಯ ವಿರುದ್ಧ ವಿಶೇಷ ಕಾರ್ಯಾಚರಣೆ: ಸಂದೀಪ್ ಪಾಟೀಲ್

Update: 2019-03-01 18:42 IST

ಮಂಗಳೂರು, ಮಾ. 1: ನಂಬರ್ ಪ್ಲೇಟ್ ಅಳವಡಿಸದ ವಾಹನಗಳು, ಕರ್ಕಶ ಹಾರ್ನ್, ನಿಯಮ ಉಲ್ಲಂಗಿಸಿ ಟಿಂಟ್ ಫಿಲಂ ಅಳವಡಿಕೆ, ನೋ ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್ ಮಾಡುವುದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರಿನ ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.

ವಾಹನಗಳಿಗೆ ಟಿಂಟ್ ಅಳವಡಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟು ತೀರ್ಪು ನೀಡಿದ್ದರೂ ಪಾಲನೆಯಾಗುತ್ತಿಲ್ಲ. ನಂಬರ್ ಪ್ಲೇಟ್, ಕರ್ಕಶ ಹಾರ್ನ್, ವಾಹನಗಳ ಪಾರ್ಕಿಂಗ್‌ಗೆ ಸಂಬಂಧಿಸಿ ಮೋಟಾರು ವಾಹನ ಕಾಯ್ದೆಯಡಿ ನಿಯಮಗಳನ್ನು ರೂಪಿಸಲಾಗಿದೆ. ಅದನ್ನೂ ಉಲ್ಲಂಸಲಾಗುತ್ತದೆ. ಇವೆಲ್ಲದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೀಪ್ ಪಾಟೀಲ್ ನುಡಿದರು.

ಲಾಲ್‌ಬಾಗ್ ಮತ್ತು ಲೇಡಿಹಿಲ್ ಬಳಿಯ ಹ್ಯಾಟ್‌ಹಿಲ್‌ನಲ್ಲಿ ಕೆಲವು ಬೀದಿ ದೀಪಗಳು ಉರಿಯುತ್ತಿಲ್ಲ. ಇಲ್ಲಿನ ಸಾರ್ವಜನಿಕ ರಸ್ತೆಯಲ್ಲಿ ಶನಿವಾರ ಮತ್ತು ರವಿವಾರ ಹಾಗೂ ರಜಾ ದಿನಗಳಲ್ಲಿ ಯುವಕರು ಕಾರುಗಳಲ್ಲಿ ಬಂದು ಮದ್ಯಪಾನ ಮಾಡಿ ಬೊಬ್ಬೆ ಹೊಡೆಯುತ್ತಾ ಸ್ಥಳೀಯ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಪಾರ್ಟಿಗಳನ್ನು ಮಾಡಿ ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಣಾಜೆ ಸಮೀಪದ ಪಜೀರು ಗ್ರಾಮದಲ್ಲಿ ನಿಯಮ ಉಲ್ಲಂಘಿಸಿ ಜಲ್ಲಿ ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯ ಮನೆಗಳಿಗೆ ಜಲ್ಲಿ ಕಲ್ಲುಗಳು ಬೀಳುತ್ತಿವೆ. ತೊಂದರೆಯ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಜಲ್ಲಿ ಕ್ರಷರ್ ನಡೆಸಲು ಲೈಸನ್ಸ್ ಇದೆಯೇ ? ಸ್ಥಳೀಯರ ಬಗ್ಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು ಇತ್ಯಾದಿ ಕುರಿತು ಪರಿಶೀಲಿಸಲು ಕೊಣಾಜೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.

ಸಿಆರ್‌ಝಡ್ ವಲಯದ ಜಾಗವನ್ನು ಮಾರಾಟ ಮಾಡುವಂತಿಲ್ಲ. ಆದರೆ ಸೋಮೇಶ್ವರದ ಸಿಆರ್‌ಝೆಡ್ ಪ್ರದೇಶದ ಸ್ಥಳವನ್ನು ಮಾರಾಟ ಮಾಡಲಾಗಿದೆ. ಖರೀದಿಸಿದ ವ್ಯಕ್ತಿ ಗೆಸ್ಟ್ ಹೌಸ್ ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದಾರೆ. ಅಲ್ಲಿ ಪಾರ್ಟಿಗಳು ನಡೆಯುತ್ತಿರುತ್ತವೆ. ಕಾನೂನು ಪ್ರಕಾರ ಇದಕ್ಕೆ ಅವಕಾಶ ಇದೆಯೇ? ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದರು.

ಈ ವಿಚಾರವನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಕೆಲವು ಬಸ್, ಲಾರಿ ಮತ್ತಿತರ ಘನ ವಾಹನಗಳಲ್ಲಿ ಬ್ರೇಕ್‌ಲೈಟ್, ಇಂಡಿಕೇಟರ್ ಉರಿಯುವುದಿಲ್ಲ. ಇದರಿಂದ ಹಿಂದಿನಿಂದ ಬರುವವರಿಗೆ ಯಾವುದೇ ಮುನ್ಸೂಚನೆ ಸಿಗದೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಗಮನ ವಹಿಸುವಂತೆ ಬಸ್ ಮಾಲಕರ ಸಂಘದ ಅಧ್ಯಕ್ಷರಿಗೆ ಆಯುಕ್ತರು ಸೂಚಿಸಿದರಲ್ಲದೆ ಆರ್‌ಟಿಒ ಗಮನಕ್ಕೂ ತರಲಾಗುವುದು ಎಂದರು.

ಪಿವಿಎಸ್ ವೃತ್ತದಲ್ಲಿ ಬಿಜೈ ವೃತ್ತದಲ್ಲಿರುವಂತೆ ಸಿಗ್ನಲ್ ಮುಕ್ತ ಮಾಡಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಎಲ್ಲಾ ಕಡೆ ಝೀಬ್ರಾ ಕ್ರಾಸಿಂಗ್‌ಗೆ ಬಣ್ಣ ಬಳಿಯಲು ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಶುಕ್ರವಾರದ 107ನೇ ಫೋನ್ ಇನ್ ಕಾರ್ಯಕ್ರಮದಲ್ಲಿ 17 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ್ ಶೆಟ್ಟಿ ಮತ್ತು ವಿನಯ್ ಎ. ಗಾಂವ್‌ಕರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗುರುದತ್ ಕಾಮತ್, ಹರೀಶ್ ಕೆ ಪಾಟಿಲ್,  ಎಸ್ಸೈ ಶೀತಲ್ ಹಲಗೂಡು, ಎಎಸ್ಸೈ ಯೋಗೇಶ್ವರನ್, ಹೆಚ್‌ಸಿ ಪುರುಷೋತ್ತಮ, ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ ಆಳ್ವ ಉಪಸ್ಥಿತರಿದ್ದರು.

ಟ್ವಿಟರ್ ಬಳಸಿ

ನಗರ ಸಂಚಾರ ಸಮಸ್ಯೆ ನಿವಾರಿಸಲು ಮತ್ತು ತುರ್ತು ಕ್ರಮ ಜರುಗಿಸಲು ಸಾಮಾಜಿಕ ಜಾಲತಾಣವಾದ ಟ್ವಿಟರ್ ಬಳಸಿ. ಇದು ಹೆಚ್ಚು ಪಾರದರ್ಶಕವಾಗಿದೆ. ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆ ಇದೆ. ಮಂಗಳೂರಿನಲ್ಲಿಯೂ ಟ್ವಿಟರ್ ಅಕೌಂಟ್ ವ್ಯವಸ್ಥೆಯನ್ನು ಜನಪ್ರಿಯಗೊಳಿಸಬೇಕು ಎಂದು ಸಂದೀಪ್ ಪಾಟೀಲ್ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News