ಯಡಿಯೂರಪ್ಪ ಹೇಳಿಕೆ ತಪ್ಪಾಗಿ ಅರ್ಥೈಕೆ: ಶೋಭಾ ಕರಂದ್ಲಾಜೆ
ಉಡುಪಿ, ಮಾ. 1: ಭಾರತೀಯ ವಾಯುಪಡೆಯ ದಾಳಿಯಿಂದ ಬಿಜೆಪಿಗೆ ಲಾಭವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆ ಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈಗಾಗಲೇ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ದಾಳಿ ಅಥವಾ ಯುದ್ದದ ಕಾರಣಕ್ಕೆ ಅವರು ಈ ಹೇಳಿಕೆ ನೀಡಿಲ್ಲ. ಪದೇ ಪದೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಯಡಿಯೂರಪ್ಪ 22 ಸೀಟು ಗೆಲ್ಲುವ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಇದು ಪ್ರತಿ ಸಂದರ್ಭ ಅವರ ಬಾಯಲ್ಲಿ ಬರುವ ಮಾತು ಅಷ್ಟೇ ಎಂದರು.
ದೇವೇಗೌಡರ ಕಾಲದಲ್ಲಿ ದೇಶದಲ್ಲಿ ಶಾಂತಿ ನೆಲೆಸಿತ್ತು ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಶೋಭಾ, ದೇವೇಗೌಡರ ಬಗ್ಗೆ ನಮಗೆ ತುಂಬಾ ಗೌರವ ಇದೆ. ಆದರೆ ಅವರು ಪ್ರಧಾನ ಮಂತ್ರಿಯಾಗಿದದ್ದು ಅಲ್ಪಾವಧಿಗೆ. ಹಿಂದಿನ ಎಲ್ಲಾ ಪ್ರಧಾನಿಗಳು ಯೋಚನೆ ಮಾಡಿರುತ್ತಿದ್ದರೆ ಇಂದು ಭಯೋತ್ಪಾ ದಕರು ನಮ್ಮ ಊರುಗಳಿಗೂ ಹೊಕ್ಕುತ್ತಿರಲಿಲ್ಲ. ಹಿಂದಿನ ಪ್ರಧಾನಿ ಗಳು ಗಡಿ ಸಮಸ್ಯೆಯನ್ನು ಸಹಿಸಿದ್ದೆ ತಪ್ಪು. ಆದರೆ ಇವತ್ತಿನ ಪ್ರಧಾನಿ ಅದನ್ನು ಸಹಿಸುವಂತವ ರಲ್ಲ ಎಂದು ಹೇಳಿದರು.
ಪುಲ್ವಾಮ ಘಟನೆಗೂ ಲೋಕಸಭಾ ಚುನಾವಣೆಗೂ ಏನು ಸಂಬಂಧ ಇಲ್ಲ. ವಿಂಗ್ ಕಮಾಂಡರ್ ಅಭಿನಂದನ್ ಅಭಿನಂದನಾರ್ಹರು. ಅವರು ಸಾಹಸದ ಕೆಲಸ ಮಾಡಿ ಬರುತ್ತಿದ್ದಾರೆ. ಜಿನಿವಾ ಒಪ್ಪಂದದ ಪ್ರಕಾರ ಸೈನಿಕರಿಗೆ ಹಾನಿ ಮಾಡಬಾರದು. ಭಾರತ ಒತ್ತಡ ತಂದ ಪರಿಣಾಮ ಅಭಿನಂದನ್ ಬಿಡುಗಡೆ ಆಗುತ್ತಿದ್ದಾರೆ. ಇದು ಭಾರತದ ರಾಜತಾಂತ್ರಿಕ ಗೆಲುವು ಎಂದು ಅವರು ತಿಳಿಸಿದರು.