ಮಾ.3ರಂದು ‘ಗ್ರಾಂಡ್ ಕೊಂಕಣ್ ಶವರ್ಸ್- 2019’
ಉಡುಪಿ, ಮಾ.1: ಉಡುಪಿ ಕೆಥೋಲಿಕ್ ಧರ್ಮಪ್ರಾಂತದ ಪಾಲನಾ ಭವನ ಮತ್ತು ಇತರ ಯೋಜನೆಗಳ ಸಹಾಯರ್ಥವಾಗಿ ‘ಗ್ರಾಂಡ್ ಕೊಂಕಣ್ ಶವರ್ಸ್- 2019’ 53ನೆ ವಿಲ್ಸನ್ ಒಲಿವೆರಾ ನೈಟ್ ಕಾರ್ಯಕ್ರಮವನ್ನು ಮಾ.3ರಂದು ಸಂಜೆ 5:30ಕ್ಕೆ ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಸೈಂಟ್ ಮೇರಿಸ್ ಕೊಂಕಣ್ ಕಮ್ಯುನಿಟಿ, ದುಬೈ ಭಾರತೀಯ ಕೆಥೋಲಿಕ್ ಯುವ ಸಂಚಲನ, ಉಡುಪಿ ಧರ್ಮಪ್ರಾಂತದ ಸಹಯೋಗದೊಂದಿಗೆ ನಡೆ ಯುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, 5000 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಯೋಜಕ ವಂ.ಡೆನಿಸ್ ಡೇಸಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೊಂಕಣಿಯ ಸುಪ್ರಸಿದ್ಧ ಗಾಯಕ ‘ಸಂಗೀತ ಸರದಾರ’ ಬಿರುದಾಂಕಿತ ವಿಲ್ಸನ್ ಒಲಿವೆರಾ ತಮ್ಮ ಜನಪ್ರಿಯ ಹಾಗೂ ಹೊಸ ಗೀತೆ ಗಳನ್ನು ಪ್ರಸ್ತುತ ಪಡಿಸಲಿರುವರು. ಕರಾವಳಿಯ ಹಲವು ಪ್ರಸಿದ್ಧ ಗಾಯಕರು ವಿಲ್ಸನ್ ಅವರಿಗೆ ಜೊತೆ ನೀಡಲಿರುವರು. ಸಂಗೀತ ನಿರ್ದೇಶಕ ರೋಶನ್ ಡಿಸೋಜ ಆಂಜೆಲೊರ್ ತಂಡ ಸಂಗೀತ ಒದಗಿಸಲಿದೆ. ನಾಚ್ ಸೊಭಾಣ್ ತಂಡದಿಂದ ವಿಭಿನ್ನ ನೃತ್ಯ ಹಾಗೂ ದ ಎಕ್ಸ್‌ಪ್ರೆಶನ್ಸ್ ತಂಡದಿಂ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಕೊಂಕಣ್ ಕಮ್ಯುನಿಟಿಯ ಅಧ್ಯಕ್ಷ ಪಾವ್ಲ್ ಕೊಲಾಸೊ, ಸ್ಥಾಪಕಾಧ್ಯಕ್ಷ ನೋಯೆಲ್ ಮಸ್ಕರೇನ್ಹಸ್, ಐಸಿವೈಎಂ ಅಧ್ಯಕ್ಷ ಡಿಯೊನ್ ಡಿಸೋಜ, ಸಂಯೋಜಕ ಲೆಸ್ಲಿ ರೇಗೊ, ರೊನಾಲ್ಡ್ ಒಲಿವೇರಾ ಉಪಸ್ಥಿತರಿದ್ದರು.