×
Ad

ಮಾತೃ ಪೂರ್ಣ ಯೋಜನೆಯ ಸ್ವರೂಪ ಬದಲಿಸಿ: ಶೋಭಾ ಕರಂದ್ಲಾಜೆ

Update: 2019-03-01 20:07 IST

ಉಡುಪಿ, ಮಾ.1: ಕರಾವಳಿ ಮತ್ತು ಮಲೆನಾಡಿನ ಗರ್ಭಿಣಿಯರು ಮನೆಯಿಂದ ತುಂಬಾ ದೂರವಿರುವ ಅಂಗನವಾಡಿಗಳಿಗೆ ತೆರಳಿ ಪೌಷ್ಠಿಕ ಆಹಾರಗಳನ್ನು ಸ್ವೀಕರಿಸಲು ಮುಂದಾಗದ ಕಾರಣ ಮಾತೃಪೂರ್ಣ ಯೋಜನೆ ಈ ಜಿಲ್ಲೆಗಳಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಇದರ ಸ್ವರೂಪದಲ್ಲಿ ಬದಲಾವಣೆ ಮಾಡಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ತನ್ನ ಅಧ್ಯಕ್ಷತೆಯಲ್ಲಿ ನಡೆದ ಈ ಅವಧಿಯ ತನ್ನ ಕೊನೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ)ಯಲ್ಲಿ ಮಾತನಾಡಿದ ಅವರು, ಒಂದು ಒಳ್ಳೆಯ ಉದ್ದೇಶದೊಂದಿಗೆ ಪ್ರಾರಂಭಗೊಂಡ ಈ ಯೋಜನೆ ಇಲ್ಲಿ ನಿರುಪಯೋಗವಾಗುತ್ತಿದೆ. ಅಲ್ಲದೇ ಇದರಲ್ಲಿ ಅಕ್ರಮ, ಅವ್ಯವಹಾರ ನಡೆಯುವ ಸಾಧ್ಯತೆಯೂ ಇದೆ ಎಂದರು.

ಹೀಗಾಗಿ ಈ ಭಾಗದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಣವನ್ನು ನೇರವಾಗಿ ಅವರ ಖಾತೆಗಳಿಗೆ ಹಾಕಬೇಕು ಅಥವಾ ಅವರ ಪಾಲಿನ ಆಹಾರ-ಪದಾರ್ಥ ಗಳನ್ನು ನೇರವಾಗಿ ಅವರ ಮನೆಗಳಿಗೆ ತಲುಪಿಸಬೇಕು. ಇದರಿಂದ ಮಾತ್ರ ಅವರಿಗೆ ಪ್ರಯೋಜನ ಸಿಗಲು ಸಾಧ್ಯ ಎಂದರು.

ಸಿಆಫ್‌ಎಫ್ ನಿಧಿಯಿಂದ ಕಳೆದ ಸಾಲಿನಲ್ಲಿ ಒಟ್ಟು 114 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ 29 ಕಾಮಗಾರಿಗಳಲ್ಲಿ 25 ಕಾಮಗಾರಿಗಳು ಮುಗಿದಿವೆ. ಕಾರ್ಕಳದ ನಾಲ್ಕು ಕಾಮಗಾರಿ ಮಾತ್ರ ಬಾಕಿ ಇದ್ದು ಇನ್ನೊಂದು ತಿಂಗಳೊಳಗೆ ಮುಗಿಯಲಿದೆ. ಎರಡನೇ ಹಂತದಲ್ಲಿ 78.5 ಕೋಟಿ ರೂ.ವೆಚ್ಚದ 12 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ಸಂಬಂಧಿತ ಅಧಿಕಾರಿ ತಿಳಿಸಿದರು.

ಮಲ್ಪೆ ಮತ್ತು ತೀರ್ಥಹಳ್ಳಿಗಳನ್ನು ಸಂಪರ್ಕಿಸುವ ರಾ.ಹೆದ್ದಾರಿ 169ಎಯನ್ನು ಆರು ಪ್ಯಾಕೇಜ್‌ಗಳಲ್ಲಿ ಚತುಷ್ಪಥಗೊಳಿಲಾಗುತ್ತಿದೆ. ಇದರಲ್ಲಿ ಉಡುಪಿಯಿಂದ ಮಲ್ಪೆ ಹಾಗೂ ತೀರ್ಥಹಳ್ಳಿಯಿಂದ ಮೇಗರಹಳ್ಳಿ ನಡುವಿನ ಎರಡು ಪ್ಯಾಕೇಜ್ ಕಾಮಗಾರಿಗಳು ಈಗ ನಡೆಯುತ್ತಿದೆ. ಉಡುಪಿ-ಪರ್ಕಳ ನಡುವಿನ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಭೂಸ್ವಾಧೀನ ಅಗತ್ಯವಿರುವ 900ಮೀ. ಬಿಟ್ಟು ಉಳಿದ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಮುಗಿಸಲಾಗುವುದು ಎಂದು ಇಂಜಿನಿಯರ್ ವಿವರಿಸಿದರು.

ಉಡುಪಿಗೆ 40 ನರ್ಮ್ ಬಸ್‌ಗಳು ಬಂದಿದ್ದು, ಅವುಗೆಳಲ್ಲವೂ ಜಿಲ್ಲೆಯಾದ್ಯಂತ ಓಡಾಟ ನಡೆಸುತ್ತಿವೆ ಎಂದು ಕೆಎಸ್ಸಾರ್ಟಿಸಿಯ ಅಧಿಕಾರಿ ತಿಳಿಸಿದರು. ಆದರೆ ಬಸ್ ಓಡಾಡುವ ಸಮಯದ ಬಗ್ಗೆ ಜನರು ದೂರುಗಳನ್ನು ನೀಡುತಿದ್ದಾರೆ ಎಂದು ಶೋಭಾ ನುಡಿದರು. ಆರ್‌ಟಿಓ ನೀಡಿದ ಸಮಯದಲ್ಲಿ ನಾವು ಬಸ್‌ಗಳನ್ನು ಓಡಿಸುತ್ತಿದ್ದೇವೆ ಎಂದವರು ವಿವರಿಸಿದರು.

ಖಾಸಗಿ ಬಸ್‌ಗಳ ಹಿಂದೆ ನರ್ಮ್ ಬಸ್‌ಗಳನ್ನು ಓಡಿಸದೇ, ಸಮಯ ಬದಲಿಸಿ ಹಾಗೂ ಹೆಚ್ಚು ಬಸ್‌ಗಳಿಲ್ಲದ ಜನರ ಬೇಡಿಕೆ ಇರುವ ಮಾರ್ಗದಲ್ಲಿ ಬಸ್ ಓಡಿಸಿ ಎಂದು ಶೋಭಾ ಸಲಹೆ ನೀಡಿದರು.

ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ ಎಲ್ಲಾ 3441 ಮನೆಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಈಗ ಸೌಭಾಗ್ಯ ಯೋಜನೆಯಡಿ 3664 ಮನೆಗಳನ್ನು ಗುರುತು ಮಾಡಲಾಗಿದ್ದು, ಈವರೆಗೆ 773 ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ. 2500 ಮನೆಗಳಿಗೆ ಮಾರ್ಚ್ ತಿಂಗಳ ಕೊನೆಯೊಳಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದರು.

ಮಲ್ಪೆ ಬಂದರಿನ ಮೂರನೇ ಹಂತದ ಪ್ರಸ್ತಾವಿತ 37.15 ಕೋಟಿ ರೂ. ಬದಲು 49.9 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಗಂಗೊಳ್ಳಿ ಬಂದರಿನಲ್ಲೂ 102 ಕೋಟಿ ರೂ. ಮೊತ್ತದ ಕಾಮಗಾರಿ ಪೂರ್ಣ ಗೊಂಡಿದೆ ಎಂದು ಬಂದರು ಇಲಾಖೆಯ ಉಪನಿರ್ದೇಶಕರು ವಿವರಿಸಿದರು.

ಪರಿಸರದ ಜನರ ಬಹುಕಾಲದ ಬೇಡಿಕೆ ಹಿನ್ನೆಲೆಯಲ್ಲಿ ಕೇಂದ್ರದಿಂದ ಮಂಜೂರುಗೊಳಿಸಿದ 138 ಕೋಟಿ ರೂ.ವೆಚ್ಚದ ಹೆಜಮಾಡಿ ಬಂದರು ಕಾಮಗಾರಿಗೆ ಇರುವ ಅಡ್ಡಿಯನ್ನು ಕೂಡಲೇ ಸರಿಪಡಿಸಿ ಸ್ಥಳೀಯರ ಕನಸು ನನಸಾಗುವಂತೆ ಮಾಡುವಂತೆ ಸಂಸದೆ ಅಧಿಕಾರಿಗಳಿಗೆ ಕಟುವಾಗಿ ತಿಳಿಸಿದರು. ಅಗತ್ಯವಿರುವ ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳುವಂತೆ ಶೋಭಾ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರಿಗೆ ಸೂಚಿಸಿದರು.

ಉಜ್ವಲ ಯೋಜನೆಯಡಿ ಅನಿಲ ಸಂಪರ್ಕಕ್ಕೆ 26,138 ಅರ್ಜಿಗಳನ್ನು ಮಂಜೂರುಗೊಳಿಸಿದ್ದು, ಈಗಾಗಲೇ 22,527 ಸಂಪರ್ಕಗಳನ್ನು ಒದಗಿಸಲಾ ಗಿದೆ. ಅಕ್ರಮದ ಕಾರಣಕ್ಕಾಗಿ ರದ್ದಾದ ಬ್ರಹ್ಮಾವರದ ಏಜೆನ್ಸಿಯಲ್ಲಿರುವ 3000 ಸಂಪರ್ಕಗಳನ್ನು ಸುತ್ತಮುತ್ತಲಿನ ಏಜೆನ್ಸಿಗಳಿಗೆ ಹಂಚಿಕೆ ಮಾಡುವಂತೆ ತಿಳಿಸಿದರು. ಉಜ್ವಲದಡಿ ಸಂಪರ್ಕ ನೀಡಲು ನಿರಾಕರಿಸುತ್ತಿರುವ ಮಣಿಪಾಲ ಏಜೆನ್ಸಿಯನ್ನು ರದ್ದುಪಡಿಸಲು ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಮೃತ ಯೋಜನೆಯಡಿ ಉಡುಪಿ ನಗರಸಭೆಗೆ ಬಂದಿರುವ 132.53 ಕೋಟಿ ರೂ. ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದ ಅವರು, ಇದರಲ್ಲಿ ಉಡುಪಿ ನಗರಕ್ಕೆ ವಾರಾಹಿಯಿಂದ ಕುಡಿಯುವ ನೀರು ತರುವ ಯೋಜನೆಗೆ ಇರುವ ಅಡ್ಡಿಗಳನ್ನು ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಬಗೆಹರಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಸಿಇಓ ಸಿಂಧು ಬಿ.ರೂಪೇಶ್, ಡಿಎಫ್‌ಓ ಪ್ರಭಾಕರನ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News