ಉಡುಪಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭಕ್ಕೆ ಪ್ರಯತ್ನ: ಶೋಭಾ
ಉಡುಪಿ, ಮಾ.1: ಗೇರುಬೀಜ ಕಾರ್ಖಾನೆ, ಕೃಷಿ ಹಾಗೂ ಮೀನುಗಾರಿಕೆ ಯಲ್ಲಿ ದೊಡ್ಡ ಸಂಖ್ಯೆಯ ಅಸಂಘಟಿತ ಕಾರ್ಮಿಕರು ಉಡುಪಿ ಜಿಲ್ಲೆಯಲ್ಲಿರುವು ದರಿಂದ ಉಡುಪಿಗೊಂದು ಇಎಸ್‌ಐ ಆಸ್ಪತ್ರೆ ಅಗತ್ಯತೆ ತುಂಬಾ ಇದೆ. ಇದಕ್ಕಾಗಿ ರಾಜ್ಯ ಸರಕಾರ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಶುಕ್ರವಾರ ಮಣಿಪಾಲದ ಅಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗಳ ಸಹಯೋಗದಲ್ಲಿ ಆಯೋಜಿ ಸಲಾದ ಮೊದಲ ಕಾರ್ಮಿಕ ಸಮ್ಮಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಜಿಲ್ಲೆಯಲ್ಲಿರುವ ಅಸಂಘಟಿತ ಕಾರ್ಮಿಕರ ಹಾಗೂ ಅವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರಕಾರದ ನೆರವಿನಿಂದ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.
ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸದ ಹೊರತು ಕೇಂದ್ರದ ಮಂಜೂರಾತಿ ದೊರೆಯುವುದಿಲ್ಲ. ಆದ್ದರಿಂದ ಉಡುಪಿ ಜಿಲ್ಲೆಯಲ್ಲಿರುವ ಕಾರ್ಮಿಕರ ಸಂಖ್ಯೆ ಮತ್ತು ಇಎಸ್‌ಐ ಆಸ್ಪತ್ರೆಯ ಅಗತ್ಯತೆ ಕುರಿತಂತೆ ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪ್ರಸ್ತುತ ರಾಜ್ಯ ಸರಕಾರ 14 ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಆದರೆ ಗೇರುಬೀಜ ಕಾರ್ಖಾನೆ, ಕೃಷಿ ಕಾರ್ಮಿಕರು ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರನ್ನೂ ಸಹ ಈ ವಲಯಕ್ಕೆ ಸೇರಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸುವ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಬೇಕು ಎಂದರು.
ಎಲ್ಲಾ ಕಾರ್ಮಿಕರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು. ಕಾರ್ಮಿಕರಿಗೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯ ಪ್ರಯೋಜನವನ್ನು ಅಲ್ಲದೇ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾರ್ಮಿಕರಿಗೆ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಕಾರ್ಮಿಕರು ಪಡೆಯಬೇಕು ಎಂದರು.
ಇದೇ ವೇಳೆ ವಿವಿಧ ವೃತ್ತಿ/ಕೆಲಸದಲ್ಲಿ ಸಾಧನೆ ಮಾಡಿದ 12 ಮಂದಿ ಕಾರ್ಮಿಕರಿಗೆ ತಲಾ 10,000ರೂ.ನಗದು ಪುರಸ್ಕಾರದೊಂದಿಗೆ ಶ್ರಮ ಸಮ್ಮಾನ ಪ್ರಶಸ್ತಿ ವಿತರಿಸಲಾಯಿತು. ಹಾಗೂ 96 ಮಂದಿಗೆ ತಲಾ 1,000ರೂ.ಗಳ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಾಪುರ ವಲಯದ ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಉಡುಪಿ ಜಿಲ್ಲೆಯಲ್ಲಿ 26,922 ಪುರುಷರು ಮತ್ತು 4344 ಮಹಿಳೆಯರು ಸೇರಿದಂತೆ ಒಟ್ಟು 31,266 ಅಸಂಘಟಿತ ಕಾರ್ಮಿಕರು ನೊಂದಣಿಯಾಗಿದ್ದು, ನೊಂದಾಯಿಸಿಕೊಂಡ ಎಲ್ಲಾ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದರು.
ಕಾರ್ಮಿಕರಿಗೆ ವಿವಿಧ ಯೋಜನೆಯಡಿ ಧನ ಸಹಾಯ ನೀಡಲಾಗುತಿದ್ದು, ಇದುವರೆಗೆ 12,370 ಪಲಾನುಭವಿಗಳಿಗೆ 12.49 ಕೋಟಿ ರೂ.ಗಳ ಧನ ಸಹಾಯನೀಡಲಾಗಿದೆ, ಸಾಮಾಜಿಕ ದ್ರತೆಯಡಿ ಅಪಘಾತದಿಂದ ಮೃತಪಟ್ಟರೆ 5 ಲಕ್ಷ ಪರಿಹಾರ ಹಾಗೂ ಶಾಶ್ವತ ಅಂಗವಿಕಲನಾದರೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಬಾಕರ್ ಆಚಾರ್ ಸ್ವಾಗತಿಸಿ, ಕಾರ್ಮಿಕ ಇಲಾಖೆಯ ಪ್ರವೀಣ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.