ಕೊಡವೂರು ನವಸುಮ ರಂಗಮಂಚ ರಂಗೋತ್ಸವಕ್ಕೆ ಚಾಲನೆ
ಮಲ್ಪೆ, ಮಾ.1: ಮನುಷ್ಯನ ದೇಹದಲ್ಲಿರುವ ರಕ್ತ ಮತ್ತು ಕಲೆಗೆ ನೇರ ಸಂಬಂಧವಿದೆ. ರಕ್ತ ಮಾನವನ ದೈಹಿಕ ಬೆಳವಣಿಗೆಗೆ ಪೂರಕವಾದರೆ ಮಾನಸಿಕ ಬೆಳವಣಿಗೆಗೆ ರಂಗಪ್ರಕಾರಗಳು, ಕಲಾ ಮಾದ್ಯಮಗಳು ಅನಿವಾರ್ಯ ಮತ್ತು ಅಗತ್ಯ ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮ ದರ್ಶಿ ನಿ.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಕೊಡವೂರು ನವಸುಮ ರಂಗಮಂಚ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೂಡುಬೆಟ್ಟು ಯುವಕ ಮಂಡಲದ ಸಹಯೋಗದಲ್ಲಿ ಕೊಡವೂರು ಮೂಡುಬೆಟ್ಟುವಿನಲ್ಲಿ ಹಮ್ಮಿಕೊಳ್ಳಲಾದ 3 ದಿನದ ರಂಗೋತ್ಸವಕ್ಕೆ ಗುರುವಾರ ಚಾಲೆ ನೀಡಿ ಅವರು ಮಾತನಾಡುತಿದ್ದರು.
ನಾಟಕಗಳು ಕೇವಲ ಮನರಂಜನೆಯ ಮಾದ್ಯಮವಲ್ಲ. ಸಮಾಜದ ಅಂಕು ಡೊಂಕುಗಳನ್ನು ತಿದ್ದಬಲ್ಲ, ಮಾನವ ಬದುಕು ರೂಪಿಸಬಲ್ಲ. ಪ್ರಬಲ ಮಾದ್ಯಮ. ಆದುದರಿಂದ ಇಂದಿನ ಸಾಮಾಜಿಕ ಜಾಲತಾಣ ಮತ್ತು ತಾಂತ್ರಿಕ ಬದುಕಿನಲ್ಲಿ ದಿನ ಕಳೆಯುತ್ತಿರುವ ಮನುಷ್ಯನ ಒತ್ತಡ ಪೂರಿತ ಮಾನಸಿಕ ಜಂಜಾಟಗಳಿಗೆ ನಾಟ ಚಿಕಿತ್ಸಾ ಮಾದ್ಯಮವಾಗಿದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ನ್ಯಾಯವಾದಿ ಸಂಕಪ್ಪ ಎ. ವಹಿಸಿದ್ದರು. ಉದ್ಯಮಿ ಮುರಳೀಧರ ಸುವರ್ಣ, ಕೆಮ್ಮಣ್ಣು ಗ್ರಾಪಂ ಸದಸ್ಯ ನಿತ್ಯಾನಂದ ಕೆಮ್ಮಣ್ಣು, ಮಲ್ಪೆ ಎಸ್‌ಆರ್‌ಎಸ್ ಕನ್‌ಸ್ಟ್ರಕ್ಷನ್‌ನ ಎಂಜಿನಿಯರ್ ಸಚಿನ್ ಕುಮಾರ್, ಉಡುಪಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರ ಶೇಖರ್, ನಗರಸಭಾ ಸದಸ್ಯ ಶ್ರೀಶ ಕೊಡವೂರು, ಮೂಡುಬೆಟ್ಟು ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಬಾ ಮುಖ್ಯ ಅತಿಥಿಗಳಾಗಿದ್ದರು.
ಮೂಡುಬೆಟ್ಟು ಯುವಕ ಮಂಡಲದ ಅಧ್ಯಕ್ಷ ಸುಧೀಶ್ ಕುಮಾರ್, ಗೌರವಾಧ್ಯಕ್ಷ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ರಂಗ ನಟ, ರಂಗ ಸಂಘಟಕ ಶೇಖರ ಬೈಕಾಡಿ, ಯಕ್ಷಗಾನ ಕಲಾವಿದ ತೊಟ್ಟಂ ವಾಸು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
ನವಸುಮದ ಅಧ್ಯಕ್ಷ ಬಾಲಕೃಷ್ಣ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪಾಧ್ಯಕ್ಷ ದಿನೇಶ್ ಅಮೀನ್ ಕದಿಕೆ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸುಶಾಂತ್ ಪೂಜಾರಿ ವಂದಿಸಿದರು. ಬಳಿಕ ಮಂಗಳೂರು ರಂಗಸಂಗಾತಿ ತಂಡದವರಿಂದ ನೆಮ್ಮದಿ ಅಪಾರ್ಟ್‌ವೆುಂಟ್ ನಾಟಕ ಪ್ರದರ್ಶನಗೊಂಡಿತು.