×
Ad

ಮಂಗಳೂರು: ಅನಧಿಕೃತ ವಾಹನ ಪಾರ್ಕಿಂಗ್ ಮಾಡಿದರೆ ದಂಡ ಕಟ್ಟಿಟ್ಟ ಬುತ್ತಿ !

Update: 2019-03-01 20:24 IST

ಮಂಗಳೂರು, ಮಾ.1: ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಿದರೆ ದಂಡ ಕಟ್ಟಿಟ್ಟ ಬುತ್ತಿಯಾಗಿದೆ. ರಸ್ತೆ ಬದಿ ನೋ ಪಾರ್ಕಿಂಗ್ ಸ್ಥಳದಲ್ಲಿ ಮತ್ತು ಪಾರ್ಕಿಂಗ್ ಜಾಗದಲ್ಲಿಯೂ ಅನಧಿಕೃತವಾಗಿ ನಿಲ್ಲಿಸುವ ವಾಹನಗಳನ್ನು ಎತ್ತಿ ಕೊಂಡೊಯ್ಯುವ ಟೋಯಿಂಗ್ ವಾಹನವು ಮಾ. 2ರಿಂದ ಕಾರ್ಯಾಚರಿಸಲಿದೆ.

ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ನಾಲ್ಕು ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ತಲಾ ಒಂದು ಟೋಯಿಂಗ್ ವಾಹನ ಹೊಂದಲು 4 ಟೋಯಿಂಗ್ ವಾಹನಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಇದೀಗ ಒಂದು ಟೋಯಿಂಗ್ ವಾಹನ ಬಂದಿದೆ. ಹೊರ ಗುತ್ತಿಗೆ ಆಧಾರದಲ್ಲಿ ಇದು ಕಾರ್ಯನಿರ್ವಹಿಸಲಿದೆ.

ರಸ್ತೆ ಬದಿ ಎಲ್ಲೆಂದರಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡುವ ವಾಹನಗಳನ್ನು ಈ ಟೋಯಿಂಗ್ ವಾಹನದಲ್ಲಿ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗುವುದು. ವಾಹನ ಮಾಲಕ/ ಚಾಲಕರು ನಿಗದಿತ ದಂಡ ಶುಲ್ಕ ಪಾವತಿಸಿ ವಾಹನವನ್ನು ಬಿಡಿಸಿಕೊಳ್ಳಬೇಕಿದೆ. ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.

ದಂಡ ಶುಲ್ಕ

ಭಾರೀ ವಾಹನಗಳಿಗೆ 1,600 ರೂ.
ಮಧ್ಯಮ ವಾಹನಗಳಿಗೆ 1,350 ರೂ.
ಲಘು ವಾಹನಗಳಿಗೆ 1,100 ರೂ.
ದ್ವಿಚಕ್ರ ವಾಹನಗಳಿಗೆ 750 ರೂ.

‘ಸಾಗರ್’ ವಾಹನ ಟ್ರ್ಯಾಕ್ ಮಾಡಲು ಜಿಪಿಎಸ್ ವ್ಯವಸ್ಥೆ

ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ‘ಸಾಗರ್’ ವಾಹನಗಳ ಚಲನವಲನವನ್ನು ಪೊಲೀಸ್ ಕಮಿಷನರ್ ತನ್ನ ಕಾರ್ಯಾಲಯದಲ್ಲೇ ಕುಳಿತು ಟ್ರ್ಯಾಕ್ ಮಾಡಲು ಅನುಕೂಲವಾಗುವಂತೆ ಜಿಪಿಎಸ್ ನ್ನು ಆಯುಕ್ತಾಲಯ ಕಚೇರಿಯಲ್ಲಿ ಅಳವಡಿಸಲಾಗಿದೆ.

ಕಮಿಷನರೆಟ್ ವ್ಯಾಪ್ತಿಯಲ್ಲಿ 25 ‘ಸಾಗರ್’ ವಾಹನಗಳಿದ್ದು, ಅವುಗಳು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತವೆ ಎನ್ನುವ ಬಗ್ಗೆ ಮಾಹಿತಿ ಈ ಜಿಪಿಎಸ್‌ನಲ್ಲಿ ಲಭ್ಯವಿದೆ. ತುರ್ತು ಸಂದರ್ಭಗಳಲ್ಲಿ ವಾಹನ ಚಾಲಕರಿಗೆ ಸೂಕ್ತ ನಿರ್ದೇಶನವನ್ನು ನೀಡಲು ಕೂಡ ಈ ವ್ಯವಸ್ಥೆಯಿಂದ ಸುಲಭ ಸಾಧ್ಯವಾಗಲಿದೆ ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News