ಉಳ್ಳಾಲಕ್ಕೆ ತಾಲೂಕು ಭಾಗ್ಯ: ದರ್ಗಾದಿಂದ ಅಭಿನಂದನೆಗೆ ನಿರ್ಧಾರ
ಉಳ್ಳಾಲ, ಮಾ.1: ಉಳ್ಳಾಲ ಭಾಗದ ಜನತೆಗೆ ಅನಿರೀಕ್ಷಿತವಾಗಿ ತಾಲೂಕು ಭಾಗ್ಯದ ಕೊಡುಗೆ ನೀಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಹಾಗೂ ದರ್ಗಾ ಸಮಿತಿಯ ಮಾಸಿಕ ಸಭೆಯು ನಿರ್ಧರಿಸಿದೆ.
ಸಭೆಯಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಭವಿಷ್ಯದ ಹಿತದೃಷ್ಟಿಯಿಂದ ಸಚಿವ ಖಾದರ್ ಸಾರ್ವಜನಿಕರಿಂದ ಬೇಡಿಕೆ ಬರುವ ಮುನ್ನವೇ ತನ್ನ ಪ್ರಭಾವ ಬಳಸಿ ಮುಖ್ಯಮಂತ್ರಿಯ ಮನ ಒಲಿಸಿ ಉಳ್ಳಾಲಕ್ಕೆ ತಾಲೂಕು ಭಾಗ್ಯ ಒದಗಿಸಿದ್ದಾರೆ. ಇದು ತನ್ನ ಕ್ಷೇತ್ರದ ಬಗ್ಗೆ ಅವರಿಗಿರುವ ದೂರದೃಷ್ಟಿತ್ವದ ಫಲವಾಗಿದೆ. ಸೈಯದ್ ಮದನಿ ದರ್ಗಾ ಮೂಲಕ ಇತಿಹಾಸದ ಪುಟದಲ್ಲಿರುವ ಉಳ್ಳಾಲದ ಸಮುದ್ರ ಕಿನಾರೆಗಳು ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಸಹಿತ ಇತರ ತಾಲೂಕು ಮಟ್ಟದ ಅಧಿಕಾರಿಗಳ ಭೇಟಿಗೆ ಮಂಗಳೂರು ಭೇಟಿಯು ತಪ್ಪಲಿದೆ. ಉಳ್ಳಾಲದ ಜನತೆಗೆ ಕೊಡುಗೆ ನೀಡಿದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.