ಪ್ರಧಾನಿ ಮೋದಿ ತಮಿಳುನಾಡು ಭೇಟಿ: ಎಂಡಿಎಂಕೆ-ಬಿಜೆಪಿ ನಡುವೆ ಘರ್ಷಣೆ

Update: 2019-03-01 15:49 GMT

ಕನ್ಯಾಕುಮಾರಿ, ಮಾ. 1: ತಿರುನೆಲ್ವೇಲಿ ಹಾಗೂ ಕನ್ಯಾಕುಮಾರಿ ಜಿಲ್ಲೆಯ ಗಡಿ ಕಾವಲಿಕಿನಾರು ಪ್ರದೇಶದಲ್ಲಿ ಬಿಜೆಪಿ ಹಾಗೂ ಎಂಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಎಂಡಿಎಂಕೆ ನಾಯಕ ವೈಕೊ ಹಾಗೂ ಅವರ ಬೆಂಬಲಿಗರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪು ಪತಾಕೆ ಪ್ರದರ್ಶಿಸಲಾಗುವುದು ಎಂದು ವೈಕೊ ಘೋಷಿಸಿದ್ದರು. ವೈಕೊ ತನ್ನ ಬೆಂಬಲಿಗರೊಂದಿಗೆ ಕಾವಲಿಕಿನಾರು ಪ್ರದೇಶದಲ್ಲಿ ಸೇರಿದ್ದರು ಹಾಗೂ ಕಾವೇರಿ ವಿವಾದ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ದ್ರೋಹ ಎಸಗಿದೆ ಎಂದು ಆರೋಪಿಸಿದ್ದರು. ವೈಕೊ ಅವರು ಮಾತನಾಡುತ್ತಿದ್ದಂತೆ ಎಂಡಿಎಂಕೆ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು. ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವೈಕೊ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿದರು.

‘‘ತಮಿಳರಿಗೆ ದ್ರೋಹ ಎಸಗಿರುವುದರಿಂದ ಮೋದಿ ಹಿಂದೆ ಹೋಗಿ’’ ಎಂದು ಎಂಡಿಎಂಕೆ ಕಾರ್ಯಕರ್ತರು ಪ್ರದರ್ಶನಾ ಫಲಕವನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ವೈಕೊ ಅವರು ಕೇಂದ್ರ ಸರಕಾರದ ವಿರುದ್ಧ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ವೈಕೊ ಹಾಗೂ ಅವರ ಬೆಂಬಲಿಗರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಸುಮಾರು 100 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವೈಕೊ ಹಾಗೂ ಅವರ ಬೆಂಬಲಿಗರು ಕನ್ಯಾಕುಮಾರಿ ಗಡಿ ಪ್ರವೇಶಿಸುವುದನ್ನು ತಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News