×
Ad

ಕಟ್ಟಡ ಕಾರ್ಮಿಕರ ನಿರ್ಲಕ್ಷ ಆರೋಪ: ಕರಂದ್ಲಾಜೆ ವಿರುದ್ಧ ಆಕ್ರೋಶ

Update: 2019-03-01 21:50 IST

ಉಡುಪಿ, ಮಾ.1: ಕೇಂದ್ರ ಸರಕಾರ ಕಟ್ಟಡ ಕಾರ್ಮಿಕರ 1996 ಕಾನೂನು ರದ್ದುಗೊಳಿಸಿ ಸಾಮಾಜಿಕ ಸುರಕ್ಷಾ ಮಸೂದೆ ಜಾರಿ ಮಾಡಲುದ್ದೇಶಿಸಿರುವ ಕ್ರಮವನ್ನು ವಿರೋಧಿಸಿ ಮನವಿ ಸಲ್ಲಿಸಲು ಕಚೇರಿಗೆ ಇಂದು ಹೋಗಿದ್ದ ಕಟ್ಟಡ ಕಾರ್ಮಿಕರನ್ನು ಸಂಸದೆ ಶೋಭಾ ಕರಂದ್ಲಾಜೆ ನಿರ್ಲಕ್ಷಿಸಿದ್ದಾರೆಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಆರೋಪಿಸಿದೆ.

ಫೆ.28ರಂದು ಕಟ್ಟಡ ಕಾರ್ಮಿಕರು ಮಣಿಪಾಲದ ರಜತಾದ್ರಿಯಲ್ಲಿರುವ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಿದ್ದರು. ಈ ವೇಳೆ ಸಂಸದರ ಸಹಾಯಕ ಮಾ.1ರಂದು ಸಂಸದರ ಜೊತೆ ಮಾತುಕತೆ ನಡೆಸಲು ಸಮಯ ನಿಗದಿ ಮಾಡಿ, ಸಂಸದರಿಗೆ ಮನವರಿಕೆ ಮಾಡಲು ಕಛೇರಿಗೆ ಬರಲು ಸಂಘದ ಪಧಾಧಿಕಾರಿಗಳನ್ನು ಆಹ್ವಾನಿಸಿದ್ದರು.

‘ಅದರಂತೆ ಇಂದು ಅವರ ಕಛೇರಿಗೆ ತೆರಳಿದಾಗ ಸಂಸದರು ನಮ್ಮ ಜತೆ ಗಡಿಬಿಡಿಯಲ್ಲಿ ನಿಂತು ಮಾತನಾಡಿ, ಎಲ್ಲವೂ ಚುನಾವಣೆ ಆದ ಮೇಲೆ ನೋಡೋಣ ಎಂದು ಕಟ್ಟಡ ಕಾರ್ಮಿಕರ ಪರ ಸ್ವಲ್ಪವೂ ಕಾಳಜಿ ವಹಿಸದೆ ಹೋಗಿರುವುದು ಖಂಡನೀಯ. ಕಟ್ಟಡ ಕಾರ್ಮಿಕರನ್ನು ನಿರ್ಲಕ್ಷ ಮಾಡುವ ಜನಪ್ರತಿನಿಧಿ ಹಾಗೂ ಸರಕಾರಗಳಿಗೆ ಕಾರ್ಮಿಕರೇ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ. ಕಟ್ಟಡ ಕಾರ್ಮಿಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಕಸಿದುಕೊಳ್ಳಲು ಕಾನೂನು ತಿದ್ದುಪಡಿ ಮಾಡಲು ಹೊರಟಿರುವ ಮೋದಿಗೆ ಧಿಕ್ಕಾರವಿರಲಿ’ ಎಂದು ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.8 ಮತ್ತು 9ರಂದು ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ದ ಸಾರ್ವತ್ರಿಕ ಮುಷ್ಕರ ಮಾಡಿದಾಗಲೂ ಮಾತುಕತೆ ಕರೆಯದ ಸರಕಾರ, ಮತ್ತೆ ಅಧಿಕಾರಕ್ಕೆ ಬಂದರೆ ಕಾರ್ಮಿಕ ವರ್ಗದ ಹಕ್ಕು ಉಳಿಯಲಾರದು. ಈ ಹಿಂದಿನ ಎಲ್ಲಾ 17 ಮಷ್ಕರದಲ್ಲಿಯೂ ಕಾರ್ಮಿಕ ಸಂಘಟನೆಗಳನ್ನು ಮಾತುಕತೆಗೆ ಕರೆದ ಇತಿಹಾಸವಿದೆ. ಆದರೆ ಮೋದಿ ಸರಕಾರದ ನೀತಿ ಬಹಳಷ್ಟು ಅಪಾಯಕಾರಿ ಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಅಧ್ಯಕ್ಷ ಯು.ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿ ಜಗದೀಶ್ ಆಚಾರ್ ಹೆಮ್ಮಾಡಿ, ಉಪಾಧ್ಯಕ್ಷ ಸಂತೋಷ ಹೆಮ್ಮಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News