ಕೋಟ ಜೋಡಿ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಕುಂದಾಪುರ, ಮಾ.1: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಚಿಕ್ಕನಕೆರೆಯ ಯುವಕರ ಜೋಡಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗನ ಬಂಧನವನ್ನು 15 ದಿನಗಳ ಕಾಲ ವಿಸ್ತರಿಸಿ ಕುಂದಾಪುರದ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ಉಡುಪಿ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಆರೋಪಿಗಳಾದ ರಾಜಶೇಖರ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಹರೀಶ್ ರೆಡ್ಡಿ, ಮೆಡಿಕಲ್ ರವಿ, ಮಹೇಶ್ ಗಾಣಿಗ, ರವಿಚಂದ್ರ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಅಭಿಷೇಕ, ಸಂತೋಷ್ ಕುಂದರ್, ನಾಗರಾಜ ರೊಟ್ಟಿ, ಶಂಕರ್ ಮೊಗವೀರ, ರತೀಶ್ ಎಂ.ಕರ್ಕೇರ, ವಿದ್ಯಾರ್ಥಿ ಪ್ರಣವ್ ರಾವ್, ಪೊಲೀಸ್ ಸಿಬ್ಬಂದಿ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ, ಸುಜಯ್ ಹಾಗೂ ಮೊಹಮ್ಮದ್ ತೌಸಿಫ್ ಎಂಬವರ ನ್ಯಾಯಾಂಗ ಬಂಧನವನ್ನು ವಿಸ್ತರಿಸು ವಂತೆ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸುಮಂಗಲಾ ನಾಯಕ್ ನಿವೇದಿಸಿದರು.
ಅದರಂತೆ ಆರೋಪಿಗಳ ನ್ಯಾಯಾಂಗ ಬಂಧನವನ್ನು ಅವಧಿಯನ್ನು ಮಾ.15 ವರೆಗೆ ವಿಸ್ತರಿಸಿ ನ್ಯಾಯಾಧೀಶ ಶ್ರೀಕಾಂತ ಎನ್.ಎ. ಆದೇಶ ನೀಡಿದರು. ನಂತರ ಎಲ್ಲ ಆರೋಪಿಗಳನ್ನು ಹಿರಿಯಡ್ಕ ಜೈಲಿಗೆ ಕೊಂಡೊಯ್ಯಲಾಯಿತು. ಆರೋಪಿಗಳು ಯತೀಶ್ ಕಾಂಚನ್ ಮತ್ತು ಭರತ್ ಶ್ರೀಯಾನ್ ಎಂಬವರು ಜ.26ರಂದು ತಡರಾತ್ರಿ ಕೋಟದ ಮಣೂರು-ಚಿಕ್ಕನಕೆರೆಯಲ್ಲಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು.