ಕೇರಳ: ವೈದ್ಯಕೀಯ ಅಧ್ಯಯನ ಪೂರ್ಣಗೊಳಿಸಿದ ಹಾದಿಯಾ

Update: 2019-03-01 16:39 GMT

ತಿರುವನಂತಪುರಂ, ಮಾ.1: ಇಸ್ಲಾಂ ಧರ್ಮ ಸ್ವೀಕರಿಸಿ ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾಗಿದ್ದ ಕೇರಳದ ಹಾದಿಯಾ ಇದೀಗ ಹೋಮಿಯೋಪಥಿಕ್ ವೈದ್ಯಕೀಯ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಅವರ ಪತಿ ಶಫೀನ್ ಜಹಾನ್ ತಿಳಿಸಿದ್ದಾರೆ.

“ಈ ಗೆಲುವು ಒಂದು ಅಪೂರ್ವ ಸಾಧನೆಯಾಗಿದೆ. ಯಾಕೆಂದರೆ ಲೆಕ್ಕವಿಲ್ಲದಷ್ಟು ಪ್ರಾರ್ಥನೆಗಳು, ಪ್ರತ್ಯೇಕಗೊಳಿಸುವುದು, ಬಂಧನದ ವಿರುದ್ಧ ನಡೆದ ಪಟ್ಟುಹಿಡಿದ ಹೋರಾಟ, ಪ್ರೀತಿ, ತಾಳ್ಮೆಯ ಬಳಿಕ ಈ ಗೆಲುವು ಒದಗಿದೆ. ಅಂತಿಮವಾಗಿ ಎಲ್ಲಾ ಅಡ್ಡಿಗಳನ್ನೂ ನಿವಾರಿಸಿಕೊಂಡು ನೀನು ಮಹತ್ವದ ಗುರಿಯನ್ನು ತಲುಪಿರುವೆ. ನಿನ್ನನ್ನು ಡಾಕ್ಟರ್ ಎಂದು ಕರೆಯಲು ತುಂಬಾ ಹೆಮ್ಮೆಯಾಗುತ್ತದೆ” ಎಂದು ಜಹಾನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೇಲಂನಲ್ಲಿ ಹೋಮಿಯೋಪಥಿ ಕಾಲೇಜಿಗೆ ಸೇರ್ಪಡೆಗೊಂಡಿದ್ದ ಹಾದಿಯಾ ಅಲ್ಲಿ ತನ್ನ ಸಹಪಾಠಿಗಳಿಂದಾಗಿ ಇಸ್ಲಾಂನತ್ತ ಆಕರ್ಷಿತಗೊಂಡಿದ್ದಳು. ಬಳಿಕ ಇಸ್ಲಾಂ ಸ್ವೀಕರಿಸಿ ಜಹಾನ್‌ರನ್ನು ವಿವಾಹವಾಗಿದ್ದಳು. ಇದನ್ನು ವಿರೋಧಿಸಿ ಆಕೆಯ ತಂದೆ ಕೆಎಂ ಅಶೋಕನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ವಿವಾಹವನ್ನು ಅನೂರ್ಜಿತಗೊಳಿಸಿ ಆಕೆಯನ್ನು ಹೆತ್ತವರೊಂದಿಗೆ ಕಳುಹಿಸುವಂತೆ ಸೂಚಿಸಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು 10 ತಿಂಗಳ ಬಳಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಹಾದಿಯಾರ ವಿವಾಹವನ್ನು ಅನೂರ್ಜಿತಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತ್ತು ಮತ್ತು ಅವರು ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲ ಒದಗಿಸುವಂತೆ ಸರಕಾರಕ್ಕೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News