ಬುದ್ಧಿಮಾಂಧ್ಯ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು, ಮಾ. 1: ಇಲ್ಲಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶುಕ್ರವಾರ ತನ್ನ 70 ನೇ ವರ್ಷದ ಹುಟ್ಟುಹಬ್ಬವನ್ನು ಪುತ್ತೂರಿನ ಕರ್ಮಲ ಎಂಬಲ್ಲಿರುವ ಪ್ರಜ್ಞಾ ಬುದ್ಧಿಮಾಂಧ್ಯ ಮಕ್ಕಳ ಜೊತೆಗೆ ಆಚರಿಸಿದರು.
ತನಗೆ ರಾಜಕೀಯ ಮರುಹುಟ್ಟು ನೀಡಿರುವ ಸ್ವಾಭಿಮಾನಿ ವೇದಿಕೆಯ ಸದಸ್ಯರೊಂದಿಗೆ ಪ್ರತಿ ವರ್ಷವೂ ಶಕುಂತಳಾ ಶೆಟ್ಟಿ ಅವರು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಬುದ್ಧಿಮಾಂಧ್ಯ ಮಕ್ಕಳ ಜೊತೆಗೆ ಸುಮಾರು 1 ಗಂಟೆಗಳ ಕಾಲ ಕಳೆದು ಅವರಿಗೆ ಸಿಹಿ ಹಂಚುವುದರೊಂದಿಗೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ಶಕುಂತಳಾ ಶೆಟ್ಟಿಯವರಿಗೆ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ನೀಡಲು ಕಾರಣವಾ ಗಿರುವ ಸ್ವಾಭಿಮಾನಿ ವೇದಿಕೆಯ ಸದಸ್ಯರ ಜೊತೆಗೆ ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇನೆ. ಕಳೆದ ವರ್ಷ ನಾಲ್ಕು ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು. ಜಿಡೆಕಲ್ಲಿನಲ್ಲಿ ಅನಾಥ ಆಶ್ರಮ ಮಕ್ಕಳಿಗೆ ಊಟದ ವ್ಯವಸ್ಥೆಯೊಂದಿಗೆ ಆಚರಣೆ ಮಾಡಲಾಯಿತು. ಈ ಭಾರಿ ಬುದ್ದಿಮಾಂಧ್ಯ ಮಕ್ಕಳ ಆಚರಣೆ ಮಾಡುವಲ್ಲಿ ಸಂತೋಷ ಸಮಾಧಾವಿದೆ. ಮನೆಯಲ್ಲಿ ಎಷ್ಟು ವೈಭವದಿಂದ ಆಚರಣೆ ಮಾಡಿದರೂ ಇಲ್ಲಿನ ಇಂತಹ ಮಕ್ಕಳ ನಡುವೆ ಆಚರಿಸುವಾಗ ಸಿಗುವ ಸಂತೋಷ ಅಲ್ಲಿ ಸಿಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಅಸಹಾಯಕರ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ನಯನಾ ರೈ, ನ್ಯಾಯವಾದಿ ಹರೀಣಾಕ್ಷಿ ಜೆ ಶೆಟ್ಟಿ, ಮನಮೋಹನ್ ರೈ, ರಾಜೇಶ್ವರಿ, ತುಳಸಿ, ಚಿತ್ರ ಮತ್ತಿತರರು ಉಪಸ್ಥಿತರಿದ್ದರು. ಪ್ರಜ್ಞಾ ಬುದ್ದಿಮಾಂದ್ಯ ಮಕ್ಕಳ ಕೇಂದ್ರದ ಅಣ್ಣಪ್ಪ ಮತ್ತು ಜ್ಯೋತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.