ಇಂದಿರಾ ಕ್ಯಾಂಟೀನ್ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸುವ ಯೋಚನೆಯಿದೆ: ಯು.ಟಿ. ಖಾದರ್
ಪುತ್ತೂರು, ಮಾ. 1: ಸಾಮಾನ್ಯ ಜನರಿಗೆ ಉಪಯುಕ್ತವಾಗಬೇಕು ಎಂಬ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಪ್ರಾರಂಬಿಸುವ ಯೋಚನೆಯನ್ನು ಮಾಡಲಾಗಿದೆ ಎಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ಹಾಗೂ ದ.ಕ. ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಅವರು ಶುಕ್ರವಾರ ಪುತ್ತೂರು ನಗರಸಭೆ ವತಿಯಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮತ್ತು ಪುತ್ತೂರು ನಗರಸಭೆ ಹಾಗೂ ಕೆ.ಯು.ಐ.ಡಿ.ಎಫ್.ಸಿ. ಜಂಟಿ ಆಶ್ರಯದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರಗಳಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿದ್ದರೆ ಜನರು ಬೇರೆ ಪ್ರದೇಶಗಳಿಗೆ ವಲಸೆ ಹೋಗುವುಸನ್ನು ತಡೆಯಬಹುದು. ಯಾರಿಗೂ ಕುಡಿಯುವ ನೀರಿನ ಕೊರತೆ ಆಗಬಾರದೆಂದು ನಿರಂತರ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇನ್ನು ಮುಂದೆ ಮನೆ ಕಟ್ಟುವಾಗ, ಲೈಸೆನ್ಸ್ ತೆಗೆದುಕೊಳ್ಳುವಾಗ ನೀರಿನ ಹಾಗೂ ಯುಜಿಡಿ ಕನೆಕ್ಷನ್ ಕೂಡ ತೆಗೆದುಕೊಳ್ಳುವಂತೆ ನಿಯಮ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಸಹಾಯಕ ಕಮೀಶನರ್ ಎಚ್.ಕೆ. ಕೃಷ್ಣಮೂರ್ತಿ, ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ಮಹಮ್ಮದ್ ರಿಯಾಝ್, ಪದ್ಮನಾಭ, ಫೌಝಿಯಾ, ಶಕ್ತಿ ಸಿನ್ಹ, ಪ್ರಸನ್ನ ಕುಮಾರ್, ಸೂರಜ್, ನಿಕೋಲಸ್ ಮತ್ತಿತರರು ಉಪಸ್ಥಿತರಿದ್ದರು.