ಮಸೂದ್ ಅಝರ್ ಪಾಕಿಸ್ತಾನದಲ್ಲಿ: ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ
ವಾಶಿಂಗ್ಟನ್, ಮಾ. 1: ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲಿರುವುದನ್ನು ಆ ದೇಶದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಒಪ್ಪಿಕೊಂಡಿದ್ದಾರೆ.
‘‘ಅವನು ಪಾಕಿಸ್ತಾನದಲ್ಲಿದ್ದಾನೆ. ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಅವನು ತುಂಬ ಅಸೌಖ್ಯದಲ್ಲಿದ್ದಾನೆ. ಅವನು ಎಷ್ಟು ಅಸ್ವಸ್ಥಗೊಂಡಿದ್ದಾನೆಂದರೆ ಅವನಿಗೆ ತನ್ನ ಮನೆಯಿಂದ ಹೊರಗೆ ಬರುವುದಕ್ಕೂ ಆಗುತ್ತಿಲ್ಲ. ನನ್ನ ಬಳಿ ಅಷ್ಟು ಮಾಹಿತಿ ಇದೆ’’ ಎಂದು ಅಮೆರಿಕದ ಸುದ್ದಿ ವಾಹಿನಿ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಕುರೇಶಿ ಹೇಳಿದರು.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ ಕನಿಷ್ಠ 40 ಯೋಧರು ಹುತಾತ್ಮರಾಗಿದ್ದಾರೆ. ಈ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.
ಜೈಶೆ ಮುಹಮ್ಮದ್ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್ ಹೊಸ ಪ್ರಯತ್ನಗಳನ್ನು ನಡೆಸುತ್ತಿರುವ ಬೆನ್ನಿಗೇ ಪಾಕಿಸ್ತಾನದ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಭಾರತ ‘‘ಗಟ್ಟಿ, ತಳ್ಳಿಹಾಕಲಾಗದ ಪುರಾವೆ’’ಯನ್ನು ಒದಗಿಸಿದರೆ ಜೈಶೆ ಮುಹಮ್ಮದ್ ಮುಖ್ಯಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕುರೇಶಿ ಹೇಳಿಕೊಂಡರು.
‘‘ಪಾಕಿಸ್ತಾನದ ನ್ಯಾಯಾಲಯಗಳಿಗೆ ಸ್ವೀಕಾರಾರ್ಹವಾಗಿರುವ ಪುರಾವೆಯನ್ನು ಅವರು ನಮಗೆ ನೀಡಿದರೆ... ಈ ಪುರಾವೆಗಳು ನ್ಯಾಯಾಲಯಕ್ಕೆ ಹೋಗುತ್ತವೆ ಹಾಗೂ ಅವುಗಳನ್ನು ನಾವು ಸಮರ್ಥಿಸಬೇಕಾಗುತ್ತದೆ... ಅವರ ಬಳಿ ಗಟ್ಟಿ, ತಳ್ಳಿಹಾಕಲು ಸಾಧ್ಯವಾಗದ ಪುರಾವೆಗಳಿದ್ದರೆ ನಮಗೆ ಕೊಡಿ. ಆಗ ನಾವು ಪಾಕಿಸ್ತಾನದ ಸ್ವತಂತ್ರ ನ್ಯಾಯಾಂಗಕ್ಕೆ ಮನವರಿಕೆ ಮಾಡಿಕೊಡಬಹುದಾಗಿದೆ’’ ಎಂದು ಅವರು ಹೇಳಿದರು.
ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್‌ರನ್ನು ಭಾರತಕ್ಕೆ ಮರಳಿಸುವ ಪ್ರಧಾನಿ ಇಮ್ರಾನ್ ಖಾನ್‌ರ ನಿರ್ಧಾರವು ‘ಸದ್ಭಾವನೆಯ ಕ್ರಮ’ವಾಗಿದೆ ಹಾಗೂ ಅದು ಉದ್ವಿಗ್ನತೆಯನ್ನು ತಣಿಸಲು ಪಾಕಿಸ್ತಾನ ಮುಕ್ತ ಮನೋಭಾವ ಹೊಂದಿರುವುದರ ದ್ಯೋತಕವಾಗಿದೆ ಎಂದರು.