×
Ad

ಅಬ್ಬಕ್ಕ ಉತ್ಸವ: ಉತ್ಸವದ ಸಿದ್ಧತೆ ಪರಿಶೀಲಿಸಿದ ಜಿಪಂ ಸಿಇಒ

Update: 2019-03-01 22:43 IST

ಮಂಗಳೂರು, ಮಾ.1: ಉಳ್ಳಾಲ ಕಡಲ ತೀರದ ವೇದಿಕೆಯಲ್ಲಿ ಮಾ.2 ಮತ್ತು 3ರಂದು ವಿಜೃಂಭಣೆಯ ಅಬ್ಬಕ್ಕ ಉತ್ಸವ ನಡೆಯಲಿದ್ದು, ಉತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ. ಅಂತಿಮ ಹಂತದ ಸಿದ್ಧತೆಗಳನ್ನು ಉತ್ಸವದ ನೋಡಲ್ ಅಧಿಕಾರಿಗಳು ಹಾಗೂ ಜಿಪಂ ಸಿಇಒ ಡಾ.ಸೆಲ್ವಮಣಿ ಇತರ ಅಧಿಕಾರಿಗಳೊಂದಿಗೆ ಶುಕ್ರವಾರ ವೀಕ್ಷಿಸಿದರು.

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾ.2ರಂದು ಅಪರಾಹ್ನ 3:30ಕ್ಕೆ ಭಾರತ್ ಪ್ರೌಢಶಾಲೆ ಉಳ್ಳಾಲದಿಂದ ಆಕರ್ಷ ಣೀಯ ಮೆರವಣಿಗೆಗೆ ಚಾಲನೆ ನೀಡುವರು.

ಸಂಜೆ 5 ಗಂಟೆಗೆ ಉಳ್ಳಾಲ ಕಡಲ ತೀರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಬ್ಬಕ್ಕ ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಅಬ್ಬಕ್ಕ ಉತ್ಸವದಲ್ಲಿ ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ ಮತ್ತು ಬಹು ಭಾಷಾ ಕವಿಗೋಷ್ಠಿ ನಡೆಯಲಿದೆ.

ಉತ್ಸವದ ಪ್ರಯುಕ್ತ ನಡೆಯುವ ಸ್ಪರ್ಧೆಗಳು: ಮಾ.2ರಂದು ಬೆಳಗ್ಗೆ 7 ಗಂಟೆಗೆ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ ನಡೆಯಲಿದ್ದು, ಉಳ್ಳಾಲ ಅಬ್ಬಕ್ಕ ಸರ್ಕಲ್‌ನಿಂದ ಪ್ರಾರಂಭಗೊಳಿಸಿ ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆ ಮೈದಾನದಲ್ಲಿ ಮ್ಯಾರಾಥಾನ್ ಮುಕ್ತಾಯಗೊಳ್ಳಲಿದೆ. ಪೂರ್ವಾಹ್ನ 9 ಗಂಟೆಗೆ ದ.ಕ. ಜಿಲ್ಲೆಯ ಫ್ರೌಢಶಾಲಾ ಬಾಲಕರಿಗೆ ಫುಟ್‌ಬಾಲ್ ಪಂದ್ಯಾಟವು ಉಳ್ಳಾಲದ ಭಾರತ್ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಮಹಿಳೆಯರ ತ್ರೋಬಾಲ್, ಆಹಾರೋತ್ಸವ, ದೋಣಿ ಸ್ಪರ್ಧೆ, ಈಜು ಸ್ಪರ್ಧೆ, ಸಾಂಪ್ರದಾಯಿಕ ಬಲೆ ಬೀಸಿ ಮೀನು ಹಿಡಿಯುವ ಸ್ಪರ್ಧೆ ಉತ್ಸವದ ವಿಶೇಷ ಆಕರ್ಷಣೆಗೆಳಾಗಿವೆ. ಮಾ.3ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಅಬ್ಬಕ್ಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಡಾ.ಸಂಧ್ಯಾ ಎಸ್. ಪೈ (ಸಾಹಿತ್ಯ ಕ್ಷೇತ್ರ) ಮತ್ತು ಉರ್ಮಿಳಾ ರಮೇಶ್ ಕುಮಾರ್ (ಸಾಹಿತ್ಯೇತರ ಕ್ಷೇತ್ರ)ಅವರ ಸಾಧನೆ ಮತ್ತು ಕೊಡುಗೆಯನ್ನು ಪರಿಗಣಿಸಿ 2018-19ರ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News