ಶರತ್ ಮಡಿವಾಳ ಹತ್ಯೆ ಪ್ರಕರಣ: ಆರೋಪಿ ನ್ಯಾಯಾಲಯಕ್ಕೆ ಶರಣು
ಬಂಟ್ವಾಳ, ಮಾ. 1: ಆರೆಸ್ಸೆಸ್ ಕಾರ್ಯಕರ್ತ, ಸಜೀಪಮುನ್ನೂರು ಗ್ರಾಮದ ಕಂದೂರು ಪಾಡಿ ನಿವಾಸಿ ಶರತ್ ಮಡಿವಾಳ ಹತ್ಯೆ ಪ್ರಕರಣದ ಎರಡನೆ ಆರೋಪಿ ಸಜೀಪಮೂಡ ಗ್ರಾಮದ ಪಣೋಲಿಬೈಲು ನಿವಾಸಿ ಖಲಂದರ್ ನಿಸಾರ್ (27) ಶುಕ್ರವಾರ ಬಂಟ್ವಾಳ ನ್ಯಾಯಲಯಕ್ಕೆ ಶರಣಾಗಿದ್ದಾನೆ.
ಶರಣಾಗತ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಮಂಗಳೂರಿನ ಜೈಲಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರ ಜುಲೈ 4ರಂದು ಬಿ.ಸಿ.ರೋಡಿನ ಉದಯ ಲಾಂಡ್ರಿಯಲ್ಲಿ ದುಷ್ಕರ್ಮಿಗಳು ಶರತ್ ಮೇಲೆ ಮಾರಕಾಸ್ತ್ರದಿಂದ ಕಡಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಶರತ್‍ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಘಟನೆಯ ಬಳಿಕ ಕೆಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣ ದಾಖಲಾಗಿನಿಂದಲೂ ಸುಮಾರು ಒಂದು ವರ್ಷ 7ತಿಂಗಳಿನಿಂದ ಆರೋಪಿ ಕಲಂದರ್ ನಿಸಾರ್ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಮಂಗಳೂರು ಜಿಲ್ಲಾ ಸೆಷನ್ ನ್ಯಾಯಾಲಯ ಹಾಗೂ ಬೆಂಗಳೂರಿನ ಉಚ್ಚ ನ್ಯಾಯಾಲಯ ಜಾಮಿನಿಗೆ ಪ್ರಯತ್ನಿಸಿದ್ದು, ನ್ಯಾಯಾಲಯವು ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ವಜಾ ಮಾಡಿರುತ್ತದೆ. ಅಲ್ಲದೆ, ಈ ಪ್ರಕರಣದಲ್ಲಿ ಒಟ್ಟು 17 ಜನ ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.