×
Ad

ಉತ್ತರ ಕೊರಿಯ ದಿಗ್ಬಂಧನ ತೆರವು ಕೋರಿತ್ತು: ಅಮೆರಿಕ

Update: 2019-03-01 22:55 IST

ಹನೋಯಿ (ವಿಯೆಟ್ನಾಮ್), ಮಾ. 1: ಸಾಮೂಹಿಕ ವಿನಾಶದ ಅಸ್ತ್ರಗಳ ಕಾರ್ಯಕ್ರಮವನ್ನು ನೇರವಾಗಿ ಗುರಿಮಾಡುವ ದಿಗ್ಬಂಧನಗಳನ್ನು ಹೊರತುಪಡಿಸಿ, ಇತರ ಎಲ್ಲ ವಿಶ್ವಸಂಸ್ಥೆಯ ದಿಗ್ಬಂಧನಗಳನ್ನು ತೆರವುಗೊಳಿಸಿದರೆ, ತನ್ನ ಯಾಂಗ್‌ ಬ್ಯಾನ್ ಪರಮಾಣು ಸಂಕೀರ್ಣವನ್ನು ಆಂಶಿಕವಾಗಿ ಮುಚ್ಚುವ ಪ್ರಸ್ತಾವವನ್ನು ಉತ್ತರ ಕೊರಿಯ ಮುಂದಿಟ್ಟಿತ್ತು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘‘ಈ ಹಂತದಲ್ಲಿ ಸಾಮೂಹಿಕ ವಿನಾಶದ ಅಸ್ತ್ರಗಳ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಿದ್ಧವಿಲ್ಲ ಎನ್ನುವ ಉತ್ತರ ಕೊರಿಯದ ನಿಲುವಿನಿಂದಾಗಿ ನಾವು ಗೊಂದಲಕ್ಕೆ ಸಿಲುಕಿದೆವು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ ನುಡಿದರು.

‘‘ಹಾಗಾಗಿ, ದಿಗ್ಬಂಧನ ತೆರವು ಮೂಲಕ ಉತ್ತರ ಕೊರಿಯಕ್ಕೆ ಹಲವು ಬಿಲಿಯ ಡಾಲರ್ ನೀಡುವುದೆಂದರೆ, ಆ ದೇಶದ ಸಾಮೂಹಿಕ ವಿನಾಶದ ಅಸ್ತ್ರಗಳ ಅಭಿವೃದ್ಧಿಗೆ ಸಬ್ಸಿಡಿ ನೀಡಿದಂತೆಯೇ ಸರಿ ಎಂಬ ನಿರ್ಧಾರಕ್ಕೆ ನಾವು ಬಂದೆವು’’ ಎಂದು ಅವರು ಹೇಳಿದರು.

ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ಮುಖ್ಯಸ್ಥ ಕಿಮ್ ಜಾಂಗ್-ಉನ್ ನಡುವೆ ನಡೆದ ಎರಡನೇ ಶೃಂಗ ಸಮ್ಮೇಳನ ಗುರುವಾರ ದಿಢೀರನೆ ಯಾವುದೇ ಒಪ್ಪಂದ ಮತ್ತು ಜಂಟಿ ಹೇಳಿಕೆಯಿಲ್ಲದೆ ಕೊನೆಗೊಂಡ ಬಳಿಕ, ಅಮೆರಿಕದ ಅಧಿಕಾರಿ ಸುದ್ದಿಗಾರರೊಂದಿಗೆ ಮಾತನಾಡಿದರು.

► ದಿಗ್ಬಂಧನದ ಆಂಶಿಕ ತೆರವು ಮಾತ್ರ ಕೇಳಿದ್ದೆವು: ಉ. ಕೊರಿಯ

ಆದಾಗ್ಯೂ, ಜನರ ಜೀವನೋಪಾಯಕ್ಕೆ ಸಂಬಂಧಿಸಿದ ದಿಗ್ಬಂಧನಗಳನ್ನು ತೆರವುಗೊಳಿಸುವಂತೆ ಮಾತ್ರ ನಾವು ಕೇಳಿದ್ದೆವು, ಸೇನಾ ದಿಗ್ಬಂಧನಗಳನ್ನು ತೆರವುಗೊಳಿಸುವಂತೆ ಕೇಳಿರಲಿಲ್ಲ ಎಂದು ಉತ್ತರ ಕೊರಿಯದ ವಿದೇಶ ಸಚಿವ ರಿ ಯೊಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News