ಡಾ. ವಿಜಯಾ ಬೆಂಗಳೂರು ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ
ಮೂಡುಬಿದಿರೆ, ಮಾ. 1: ಶಿವರಾಮ ಕಾರಂತ ಪ್ರತಿಷ್ಠಾನವು ಹಿರಿಯ ಸಾಹಿತಿ, ಹೋರಾಟಗಾರ್ತಿ ಡಾ.ವಿಜಯಾ ಬೆಂಗಳೂರು ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ, ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ತಮ್ಮ ಕೃತಿ `ಸಾವಿತ್ರಿಬಾಯಿ ಪುಲೆ', ಲೇಖಕ ಮಸುಮ, ಕಾರ್ಕಳ ಅವರು ಕೃತಿ `ಬೂಬನ ಕಥೆಗಳು' ಹಾಗೂ ಆಗುಂಬೆ ಎಸ್. ನಟರಾಜ್ ಅವರು ತಮ್ಮ ಕೃತಿ `ಗಾಂಧೀಜಿ ಜಾಡಿನಲ್ಲಿ ನೌಕಾಲಿಗೊಂದು ಮರುಯಾತ್ರೆ' ಇವುಗಳಿಗಾಗಿ ಶಿವರಾಮ ಕಾರಂತ ಪುರಸ್ಕಾರ ನೀಡಿ ಗೌರವಿಸಿದೆ.
ಎಂಸಿಎಸ್‍ಬ್ಯಾಂಕ್ ಸಹಯೋಗದಲ್ಲಿ ನಡೆಸಿದ, 19ನೇ ವರ್ಷದ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂವರನ್ನು ಗೌರವಿಸಲಾಗಿದೆ. ಕಾರಂತ ಪ್ರತಿಷ್ಠಾನ ಮತ್ತು ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿಜಯಾ ಬೆಂಗಳೂರು, ಸಮಾಜದ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಡಿದವರು ಶಿವರಾಮ ಕಾರಂತರು. ಪದ್ಮಭೂಷಣ ಪ್ರಶಸ್ತಿಯನ್ನು ಹಿಂದುರಿಗಿಸುವ ಮೂಲಕ ತಾತ್ವಿಕ ಪ್ರತಿಭಟನೆ ನಡೆಸಿದ್ದರು ಎಂದರು.
ಕಾರಂತರ ಕಾದಂಬರಿಗಳ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳಿ ಸ್ವಾಗತಿಸಿ ನಿರೂಪಿಸಿದರು.
ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ, ಎಂಸಿಎಸ್‍ಬ್ಯಾಂಕ್ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ಸಿಇಓ ಎಂ. ಚಂದ್ರಶೇಖರ ವಂದಿಸಿದರು.