ಲೋಕಸಭಾ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಯಲಿದೆ: ಸಿಇಸಿ

Update: 2019-03-01 17:31 GMT

ಲಕ್ನೋ,ಮಾ.1: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನತೆಯ ನಡುವೆಯೇ,ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಿಗದಿತ ಸಮಯಕ್ಕೇ ನಡೆಯಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಸುನಿಲ್ ಅರೋರಾ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಚುನಾವಣಾ ಸಿದ್ಧತೆಗಳ ಪುನರ್‌ಪರಿಶೀಲನೆಗಾಗಿ ಕಳೆದೆರಡು ದಿನಗಳಿಂದ ಉತ್ತರ ಪ್ರದೇಶದಲ್ಲಿರುವ ಅರೋರಾ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚುನಾವಣಾ ವೇಳಾಪಟ್ಟಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಆಯೋಗದ ನೂತನ ಅಧಿಸೂಚನೆಯಂತೆ ಅಭ್ಯರ್ಥಿಗಳು ದೇಶದಲ್ಲಿರುವ ತಮ್ಮ ಆಸ್ತಿಗಳ ಜೊತೆಗೆ ವಿದೇಶಗಳಲ್ಲಿರುವ ಆಸ್ತಿಗಳ ವಿವರಗಳನ್ನೂ ಸಲ್ಲಿಸಬೇಕಾಗುತ್ತದೆ. ಅದನ್ನು ಆದಾಯ ತೆರಿಗೆ ಇಲಾಖೆಯು ಪರಿಶೀಲಿಸುತ್ತದೆ. ಏನಾದರೂ ಲೋಪದೋಷಗಳು ಕಂಡುಬಂದರೆ ಅದನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಕಠಿಣ ಕ್ರಮವನ್ನು ಜರುಗಿಸಲಾಗುತ್ತದೆ ಎಂದರು.

ಪ್ರಚೋದನಾಕಾರಿ ಭಾಷಣಗಳ ಕುರಿತು ಆಯೋಗದ ನಿಲುವಿನ ಕುರಿತು ಪ್ರಶ್ನೆಗೆ ಅವರು,ತನ್ನ ಪುನರ್‌ಪರಿಶೀಲನಾ ಸಭೆಗಳಲ್ಲಿ ಹಿಂದಿನ ಚುನಾವಣೆಗಳ ಸಂದರ್ಭ ದಾಖಲಾಗಿದ್ದ ಇಂತಹ ಪ್ರಕರಣಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮಗಳನ್ನು ಜರುಗಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚಿಸಲಾಗಿದ್ದು,ಅದನ್ನು ಪಾಲಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಉತ್ತರಿಸಿದರು.

ಮುಕ್ತ ಮತ್ತು ನ್ಯಾಯುಯುತ ಚುನಾವಣೆಗಳನ್ನು ನಡೆಸಲು ಆಯೋಗವು ಬದ್ದವಾಗಿದೆ ಮತ್ತು ಈ ಸಂಬಂಧ ಯಾವುದೇ ದೂರಿನ ಕುರಿತು ಆಯೋಗವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದ ಅರೋರಾ,ಯಾವುದೇ ಪ್ರಜೆಯು ಮತದಾನಕ್ಕೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಅನುಕೂಲವಾಗುವಂತೆ ಸಿ-ವಿಜಿಲ್ ಆ್ಯಪ್‌ನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ಎಲ್ಲ 1,63,331 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುವುದು ಎಂದರು.

ಇವಿಎಂಗಳನ್ನು ‘ಫುಟ್ಬಾಲ್’ನಂತೆ ನೋಡಲಾಗುತ್ತಿದೆ

ವಿದ್ಯುನ್ಮಾನ ಮತದಾನ ಯಂತ್ರ(ಇವಿಎಂ)ಗಳ ಕಾರ್ಯ ನಿರ್ವಹಣೆಯ ಬಗ್ಗೆ ರಾಜಕೀಯ ಪಕ್ಷಗಳು ಶಂಕೆಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅರೋರಾ, ಇವಿಎಂಗಳನ್ನು ‘ಫುಟ್ಬಾಲ್’ನಂತೆ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು. ಎರಡು ದಶಕಗಳಿಗೂ ಅಧಿಕ ಸಮಯದಿಂದ ಇವಿಎಂಗಳನ್ನು ಬಳಸಲಾಗುತ್ತಿದೆ. 2014ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನಾವು ಪರಿಗಣಿಸಿದರೆ ನಾಲ್ಕು ತಿಂಗಳುಗಳ ಬಳಿಕ ಪ್ರಕಟಗೊಂಡಿದ್ದ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು ವಿಭಿನ್ನವಾಗಿದ್ದವು. ತಿಳಿದೋ ತಿಳಿಯದೆಯೋ ನಾವು ಇವಿಎಂಗಳನ್ನು ಫುಟ್ಬಾಲ್‌ನ್ನಾಗಿ ಮಾಡಿಬಿಟ್ಟಿದ್ದೇವೆ. ಫಲಿತಾಂಶ ‘ಎಕ್ಸ್’ಪಕ್ಷದ ಪರವಾಗಿದ್ದರೆ ಇವಿಎಂಗಳು ಸರಿ,ಫಲಿತಾಂಶ ‘ವೈ’ಪಕ್ಷದ ಪರವಾಗಿದ್ದರೆ ಆಗ ಅವು ದೋಷಪೂರ್ಣವಾಗಿಬಿಡುತ್ತವೆ ಎಂದರು.

ರಾಜಕೀಯ ಪಕ್ಷಗಳು ವ್ಯಕ್ತಪಡಿಸಿರುವ ಶಂಕೆಗಳ ಬಗ್ಗೆ ಆಯೋಗದ ನಿಲುವಿನ ಕುರಿತು ಪ್ರಶ್ನೆಗೆ ಅವರು,ಜನರ ಭಾವನೆಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ ಮತ್ತು ವಿವಿಪ್ಯಾಟ್ ಯಂತ್ರಗಳ ಬಳಕೆಯನ್ನು ಆರಂಭಿಸಿದ್ದೇವೆ. ಪ್ರಾರಂಭದಲ್ಲಿ ಕೆಲವು ಸಮಸ್ಯೆಗಳಿದ್ದವಾದರೂ ಅವುಗಳ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News