×
Ad

ಪಾಕ್ ಗಡಿಯಲ್ಲಿ ಡಬ್ಲ್ಯುಎಸಿ ಮುಖ್ಯಸ್ಥರಾಗಿ ಕಾರ್ಗಿಲ್ ಹಿರೋ ನಂಬಿಯಾರ್ ನೇಮಕ

Update: 2019-03-01 23:03 IST

ಹೊಸದಿಲ್ಲಿ,ಮಾ.1: 1999ರಲ್ಲಿ ಪಾಕಿಸ್ತಾನಿ ಯೋಧರು ಆಕ್ರಮಿಸಿಕೊಂಡಿದ್ದ ಟೈಗರ್ ಹಿಲ್ ‌ನ ಮೇಲೆ ಬಾಂಬ್ ದಾಳಿ ನಡೆಸಿ ಸಾಹಸವನ್ನು ಮೆರೆದಿದ್ದಕ್ಕಾಗಿ ಶೌರ್ಯ ಪದಕವನ್ನು ಗೆದ್ದಿದ್ದ ಕಾರ್ಗಿಲ್ ಯುದ್ಧದ ಹಳೆಯ ಹುಲಿ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರು ಪಾಕಿಸ್ತಾನ ಗಡಿಯುದ್ದಕ್ಕೂ ವಾಯುಪ್ರದೇಶವನ್ನು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಒಳಗೊಂಡಿರುವ ಪಶ್ಚಿಮ ಏರ್ ಕಮಾಂಡ್(ಡಬ್ಲುಎಸಿ)ನ ಮುಖ್ಯಸ್ಥರಾಗಿ ಶುಕ್ರವಾರ ಅಧಿಕಾರವನ್ನು ವಹಿಸಿಕೊಂಡರು.

ಅವರು ಪೂರ್ವ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ನಂಬಿಯಾರ್ ಅವರ ಪೂರ್ವಾಧಿಕಾರಿ ಏರ್ ಮಾರ್ಷಲ್ ಚಂದ್ರಶೇಖರನ್ ಹರಿಕುಮಾರ ಅವರು 39 ವರ್ಷಗಳ ಸುದೀರ್ಘ ಸೇವೆಯ ಬಳಿಕ ಶುಕ್ರವಾರ ನಿವೃತ್ತರಾಗಿದ್ದಾರೆ. ಅವರು ಫೆ.26ರಂದು ನಡೆದಿದ್ದ ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲಿನ ವಾಯುದಾಳಿಗಳ ಉಸ್ತುವಾರಿಯನ್ನು ಹೊಂದಿದ್ದರು.

ಸ್ಕ್ವಾಡ್ರನ್ ಲೀಡರ್ ಪದ್ಮನಾಭನ್ ನಂಬಿಯಾರ್-ಐಲಿಯತ್ ರಾಧಾ ನಂಬಿಯಾರ್ ದಂಪತಿಯ ಪುತ್ರರಾಗಿರುವ ಆರ್.ನಂಬಿಯಾರ್ ರಾಷ್ಟ್ರೀಯ ರಕ್ಷಣಾ ಅಕಾಡಮಿಯ ಹಳೆಯ ವಿದ್ಯಾರ್ಥಿಯಾಗಿದ್ದು,ಜೂನ್ 1981ರಲ್ಲಿ ಫೈಟರ್ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದರು.

ಹಲವಾರು ಸಾಧನೆಗಳ ಸರದಾರರಾಗಿರುವ ನಂಬಿಯಾರ್ ಮಿರಾಜ್ 2000 ಯುದ್ಧವಿಮಾನದಲ್ಲಿ ಅತ್ಯಂತ ಹೆಚ್ಚಿನ,2300 ಗಂಟೆಗೂ ಅಧಿಕ ಕಾಲ ಹಾರಾಟ ನಡೆಸಿದ ಹೆಗ್ಗಳಿಕೆ ಹೊಂದಿದ್ದು,ಒಟ್ಟು 5,100 ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News