ಕಾಂಗ್ರೆಸ್‌ಗೆ ದೇಶದ ಚಿಂತೆ, ಬಿಜೆಪಿಗೆ ಸೀಟಿನ ಚಿಂತೆ: ಸಚಿವ ಖಾದರ್

Update: 2019-03-02 11:25 GMT

ಮಂಗಳೂರು, ಮಾ.2: ಬಿಜೆಪಿಯವರು ರಾಜಕೀಯಕ್ಕಾಗಿ ಯಾವುದೇ ಹಂತಕ್ಕೂ ಹೋಗಲು ಸಾಧ್ಯ ಎಂಬುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದ ಸೈನಿಕರ ಮೇಲಿನ ದಾಳಿಯ ಬಗ್ಗೆ ಕಾಂಗ್ರೆಸ್ ದೇಶದ ಬಗ್ಗೆ ಚಿಂತಿಸುತ್ತಿದ್ದರೆ, ಬಿಜೆಪಿ ಮಾತ್ರ ಸೀಟಿನ ಬಗ್ಗೆ ಚಿಂತೆ ನಡೆಸುತ್ತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೈನಿಕರ ಮೇಲಿನ ದಾಳಿ ಸಂದರ್ಭ, ಸೈನಿಕರ ಕುಟುಂಬ ಹಾಗೂ ದೇಶದ ಜತೆ ಇರುವ ಬದಲು ಮಾಜಿ ಮುಖ್ಯಮಂತ್ರಿಯೊಬ್ಬರು ರಾಜಕೀಯವಾಗಿ ಮಾತನಾಡಿರುವುದು ಕಪ್ಪು ಚುಕ್ಕೆ ಎಂದರು.

ಮುಂಬೈ ದಾಳಿ ಸಂದರ್ಭ ಅದರ ಹೊಣೆ ಹೊತ್ತು ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕೆಳಗಿಳಿಸಿತ್ತು. ಇದೀಗ ಕೇಂದ್ರ ನಾಯಕರು ದೇಶಕ್ಕೆ ತಮ್ಮ ಜವಾಬ್ಧಾರಿಯನ್ನು ತೋರಿಸಬೇಕಾಗಿದೆ ಎಂದರು.

ದೇಶಕ್ಕೆ ವಾಪಾಸಾಗಿರುವ ಪೈಲಟ್ ಅಭಿನಂದನ್‌ಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದ ಸಚಿವ ಖಾದರ್, ಯಾವುದೇ ರೀತಿಯ ಮಾಹಿತಿಯನ್ನು ಶತ್ರು ಸೈನಿಕರಿಗೆ ನೀಡದೆ ಅಭಿನಂದನ್‌ರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಡಿಮೆ ಮಾತನಾಡಿದರೂ ಅವರ ಮಾತಿಗೆ ಘನತೆ ಇತ್ತು. ಆದರೆ ಈಗಿನ ಪ್ರಧಾನಿ ಏನು ಮಾತನಾಡುತ್ತಿದ್ದಾರೆಂಬುದನ್ನು ಮಕ್ಕಳೂ ಪ್ರಶ್ನಿಸುವಂತ ಪರಿಸ್ಥಿತಿಯಿದೆ ಎಂದು ಖಾದರ್ ವ್ಯಂಗ್ಯವಾಡಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News