×
Ad

ಅನುದಾನಿತ ಶಾಲೆ-ವಿದ್ಯಾರ್ಥಿ ಹಾಗು ಶಿಕ್ಷಕರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಮನವಿ

Update: 2019-03-02 17:09 IST

ಮಂಗಳೂರು, ಮಾ.2: ಅನುದಾನಿತ ಶಾಲೆ-ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಆನುದಾನಿತ ಪ್ರಾಥುಕ ಶಾಲಾ ಶಿಕ್ಷಕರ ಸಂಘವು ದ.ಕ.ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿತು.

ಸ್ವಾತಂತ್ರಪೂರ್ವದಿಂದಲೇ ಮಠ, ಮಂದಿರ, ಮಸೀದಿ, ಚರ್ಚ್‌ಗಳು ಮಾತೃ ಭಾಷೆಯಲ್ಲೇ ಶಾಲೆಗಳನ್ನು ತೆರೆದು ಉಚಿತವಾಗಿ ಉತ್ತಮ ಶಿಕ್ಷಣವನ್ನು ಕೊಡುತ್ತಾ ಬಂದಿದೆ. ಅದರಲ್ಲೂ ದ.ಕ. ಮತ್ತು ಉಡುಪಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಖಾಸಗಿ ಕನ್ನಡ ಶಾಲೆಗಳೇ ಕಾರಣವಾಗಿದೆ. ಈ ಶಾಲೆಗಳ ಕಾರ್ಯವೈಖರಿ ಹಾಗೂ ಶೈಕ್ಷಣಿಕ ಕಾಳಜಿಯನ್ನು ಮನಗಂಡು ಸರಕಾರವು ಅನುದಾನ ನೀಡುತ್ತಾ ಬಂದಿದೆ. ಆದರೆ ಇತ್ತೀಚೆಗೆ ಸರಕಾರವು ತಾರತಮ್ಯ ನೀತಿ ಅನುಸರಿಸಿದ ಕಾರಣ ಅನುದಾನಿತ ಶಾಲೆಗಳು ಮುಚ್ಚುವ ಭೀತಿಯಲ್ಲಿದೆ ಎಂದಿರುವ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯದ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಆಗುತ್ತಿರುವ ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
   
ಕಾಲ್ಪನಿಕ ವೇತನ ಭಡ್ತಿ ಜಾರಿಗೊಳಿಸಲು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದ ಸದನ ಸಮಿತಿ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, 1ರಿಂದ 7ನೇ ತರಗತಿಯ ಅನುದಾನಿತ ಪ್ರಾಥಮಿಕ ಶಾಲಾ ಮಕ್ಕಳಿಗೂ ಉಚಿತ ಸಮವಸ್ತ್ರ, ಶೂ, ಸಾಕ್ಸ್‌ಗಳನ್ನು ನೀಡಬೇಕು, ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯವನ್ನು ಕಲ್ಪಿಸಬೇಕು, ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವುದು ಮತ್ತು ಈಗಾಗಲೆ ವಂಚಿತರಾಗಿರುವ 10, 15, 20, 25 ಮತ್ತು 30 ವರ್ಷಗಳ ವಿಶೇಷ ಭಡ್ತಿಗಳನ್ನು ಮಂಜೂರು ಮಾಡುವುದು, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ (ಆರೋಗ್ಯ ಯೋಜನೆ)ಜಾರಿಗೊಳಿಸಬೇಕು, ಅನುದಾನಿತ ಪ್ರಾಥಮಿಕ ಶಾಲೆಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿಯದೆ ಎಂದಿನಂತೆ ಬಿಡುಗಡೆಗೊಳಿಸಬೇಕು, ಹೆಚ್ಚುವರಿ ಶಿಕ್ಷಕರನ್ನು ಮರು ಹಂಚಿಕೆ ಮಾಡಬೇಕು, ಕಳೆದ ನವೆಂಬರ್‌ನಿಂದ ನಿವೃತ್ತಿಯಾದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಜೆ ನಗದೀಕರಣ ಹಾಗೂ ಇತರ ಸೌಲಭ್ಯಗಳಿಗೆ ಪ್ರತೇಕ ಅನುದಾನ ಒದಗಿಸಬೇಕು, ಸರಕಾರಿ ಕನ್ನಡ ಮಾಧಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸುವುದರಿಂದ ಉದ್ಯೋಗ ಭೀತಿ ಎದುರಿಸುವ ಅನುದಾನಿತ ಶಿಕ್ಷಕರನ್ನು ಸರಕಾರಿ ಶಾಲೆಗೆ ವರ್ಗಾಯಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆಎಂಕೆ ಮಂಜನಾಡಿ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ಟ್ಯಾನ್ನಿ ತಾವ್ರೋ, ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಜಯವಂತಿ, ಮಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎಂ.ಎಚ್.ಮಲಾರ್, ಮಂಗಳೂರು ಉತ್ತರ ವಿಭಾಗದ ಅಧ್ಯಕ್ಷ ಅಂಬರೀಶ್, ಜಿಲ್ಲಾ ಉಪಾದ್ಯಕ್ಷೆ ವೇದಾವತಿ, ಸುಬ್ರಮಣ್ಯ ಭಟ್, ಹಮೀದ್, ಲ್ಯಾನ್ಸಿ, ವನಿತಾ, ಮೇರಿ ಡಿಸೋಜ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News