×
Ad

ಐಎಎಸ್ ಅಧಿಕಾರಿಯಾಗಲು ಬಹಳ ಬುದ್ದಿವಂತರಾಗಬೇಕಾಗಿಲ್ಲ: ರಾಜೇಂದ್ರ ಪ್ರಸಾದ್

Update: 2019-03-02 18:46 IST

ಉಡುಪಿ, ಮಾ.2: ಐಎಎಸ್ ಅಧಿಕಾರಿಯಾಗಲು ಬಹಳ ಬುದ್ದಿವಂತರಾಗ ಬೇಕಾಗಿಲ್ಲ. ತಮ್ಮಲ್ಲಿರುವ ಬುದ್ದಿವಂತಿಕೆಯನ್ನು ಸರಿಯಾಗಿ ಬಳಸಿಕೊಂಡರೆ ಸಾಕಾಗುತ್ತದೆ ಎಂದು ಹೊಸದಿಲ್ಲಿಯ ಜಿಎಸ್‌ಟಿ ಆಯುಕ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಐಕ್ಯು ಎಸಿ ಮತ್ತು ಉಡುಪಿಯ ಪ್ರೈಮ್ ಸಂಸ್ಥೆಯ ಆಶ್ರಯದಲ್ಲಿ ಕಾಲೇಜಿನ ಎ.ವಿ.ಹಾಲ್‌ನಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಐಎಎಸ್ ಪರೀಕ್ಷಾ ತಯಾರಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಐಎಎಸ್ ಅಧಿಕಾರಿಯಾಗುವ ಬಯಕೆ ಮೊದಲು ಮೂಡಬೇಕು. ನಂತರ ಅದನ್ನು ಸಾಧಿಸುವ ಗುರಿ ಹೊಂದಬೇಕು. ಅದಕ್ಕೆ ಪೂರ್ವಸಿದ್ಧತೆಯೊಂದಿಗೆ ಬದ್ಧತೆ ಕೂಡ ಮುಖ್ಯವಾಗುತ್ತದೆ. ಛಲ ಇದ್ದರೆ ಅದನ್ನು ಸಾಧಿಸುವುದು ಕಷ್ಟ ಅಲ್ಲ ಎಂದು ಅವರು ಹೇಳಿದರು.

ಯುಪಿಎಸ್‌ಸಿ ಪರೀಕ್ಷೆಗಳ ಬಗ್ಗೆ ಆಳವಾಗಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಬೇಕು. ಪ್ರತಿದಿನ ಪತ್ರಿಕೆ ಓದಬೇಕು. ಮೂರು ನಾಲ್ಕು ವರ್ಷಗಳ ಕಾಲ ಮೋಜು ಮಸ್ತಿಯನ್ನು ತ್ಯಾಗ ಮಾಡಬೇಕು. ಆಗ ಮಾತ್ರ ಇದರಲ್ಲಿ ಜಯ ಸಾಧಿಸಲು ಸಾಧ್ಯ ಎಂದರು.

ಶಿಕ್ಷಿತರ ಹಾಗೂ ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇವೆಗಳಿಗೆ ಬರುತ್ತಿಲ್ಲ. ಇದಕ್ಕೆ ನಮ್ಮಲ್ಲಿ ಕಠಿಣ ಪರಿ ಶ್ರಮ ಪಡದಿರುವುದು ಹಾಗೂ ತಮ್ಮಲ್ಲಿರುವ ಜ್ಞಾನ, ಬುದ್ದಿ, ಮಾಹಿತಿ ಹಾಗೂ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವುದೇ ಕಾರಣ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ವಹಿಸಿ ದ್ದರು. ಪ್ರೈಮ್ ಐಎಎಸ್ ತರಬೇತಿ ಸಂಸ್ಥೆಯ ರತ್ನ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಮೆಂಡನ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News