ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ: ಆರೋಪಿಗೆ ಎರಡು ವರ್ಷ ಜೈಲು
ಮಂಗಳೂರು, ಮಾ.2: ಮರಕಡ ಗ್ರಾಮದ ಬಾಯಾಡಿಯಲ್ಲಿ ನಡೆದ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣದಲ್ಲಿ ಅಪರಾಧಿಗೆ ಎರಡು ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ರಾಮ ನಲ್ಕೆ (45) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣ ವಿವರ: ರಾಮ ನಲ್ಕೆ ತನ್ನ ಪತ್ನಿ ಮೋಹಿನಿ ಮತ್ತು ಮಕ್ಕಳಾದ ಧನುಷ್, ಧನ್ಯ ಜತೆ ಮರಕಡದ ಬಾಯಾಡಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. 2018ರ ಮೇ 17ರಂದು ರಾತ್ರಿ 9ಗಂಟೆಗೆ ರಾಮ ನಲ್ಕೆ ಕೆಲಸ ಮುಗಿಸಿ ಮನೆಗೆ ಬಂದು ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡ ಪತ್ನಿ ಮೋಹಿನಿ ವಿರೋಧಿಸಿ, ಅಸಮಾಧಾನ ತೋರ್ಪಡಿಸಿದರು.
ಈ ವೇಳೆ ಕೋಪಗೊಂಡ ರಾಮ ನಲ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಟ್ಟೆಗೆ ಕಾಲಿನಿಂದ ತುಳಿದು ಗಂಭೀರ ಹಲ್ಲೆ ಮಾಡಿದ್ದರು. ಇದರಿಂದ ನೆಲಕ್ಕೆ ಬಿದ್ದಾಗ ಪುತ್ರ ಧನುಷ್ ಬೊಬ್ಬೆ ಹಾಕಿದ್ದು, ಆತನನ್ನು ರಾಮ ನಲ್ಕಿ ಸಮಾಧಾನಪಡಿಸಿದ್ದಾನೆ.
ನೆಲದ ಮೇಲೆ ಬಿದ್ದಿರುವ ಮೋಹಿನಿಯವರು ಮೇ 19ರಂದು ಬೆಳಗ್ಗೆ ಏಳದಿದ್ದಾಗ ಕೊಲೆ ಮಾಡುವ ಉದ್ದೇಶದಿಂದ ತಾನು ಸೇದುತ್ತಿದ್ದ ಬೀಡಿಯ ಬೆಂಕಿಯಿಂದ ಕೈ, ಕಾಲು ಸೊಂಟಕ್ಕೆ ಸುಟ್ಟು ಗಾಯಗೊಳಿಸಿದ್ದಾನೆ. ಇದಾದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ 2018ರ ಮೇ 19ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮೃತರ ಮಗ ನೀಡಿದ ದೂರಿನ ಆಧಾರದಲ್ಲಿ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
11 ಸಾಕ್ಷಿ ವಿಚಾರಣೆ: ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಒಟ್ಟು 11 ಸಾಕ್ಷಿಗಳ ವಿಚಾರಣೆ ನಡೆಸಿ, ಆರೋಪಿಯ ಕಲಂ 498ಎ, 304(11)ರಡಿ ಅಪರಾಧಿಯೆಂದು ಘೋಷಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಕಲಂ 498(2)ರಡಿ ಆರೋಪಿಗೆ ಎರಡು ವರ್ಷ ಸಾದಾ ಸಜೆ ಮತ್ತು 5ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಶಿಕ್ಷೆ. ಭಾರತೀಯ ದಂಡ ಸಂಹಿತೆ 304(11)ರಡಿ 2 ವರ್ಷ ಕಠಿಣ ಶಿಕ್ಷೆಯ ತೀರ್ಪು ನೀಡಿದ್ದಾರೆ. ಅಪರಾಧಿ ಬಂಧನವಾದ ಬಳಿಕ ಜೈಲುವಾಸದಲ್ಲೇ ಇರುವ ಕಾರಣ ನ್ಯಾಯಾಂಗ ಬಂಧನ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ.
ತೀರ್ಪಿನಲ್ಲಿ ಮಕ್ಕಳಾದ ಧನುಷ್, ಧನ್ಯ ಅವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ನಗರದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯಿರುವ ವಸತಿ ಶಾಲೆಗೆ ಸೇರ್ಪಡೆ ಮಾಡಬೇಕು. ಇದು ಮಾತ್ರವಲ್ಲದೆ ಮೃತ ಮೋಹಿನಿಯವರ ತಂಗಿ ಶಶಿಕಲಾ ಅವರು ಪ್ರತಿ ತಿಂಗಳು ಇಬ್ಬರು ಮಕ್ಕಳನ್ನು ಜೈಲುವಾಸದಲ್ಲಿರುವ ತಂದೆಯನ್ನು ತೋರಿಸಲು ಕರೆದುಕೊಂಡು ಹೋಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಕಾವೂರು ಪೊಲೀಸ್ ನಿರೀಕ್ಷಕ ಕೆ.ಆರ್. ನಾಕ್ ತನಿಖೆ ನಡೆಸಿ ಆರೋಪಿ ವಿರುದ್ಧ ಕಲಂ 498ಎ ಹಾಗೂ 302 ಐಪಿಸಿರಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ಮಕ್ಕಳಾದ ಧನುಷ್ ಮತ್ತು ಧನ್ಯಶ್ರೀ ನ್ಯಾಯಾಲಯದಲ್ಲಿ ಸಾಕ್ಷಿ, ಮ್ಯಾಜಿಸ್ಟ್ರೇಟರ ಮುಂದೆಯೂ ಹೇಳಿಕೆ ನೀಡಿದ್ದಾರೆ.
ಮರಣೊತ್ತರ ಶವ ಪರೀಕ್ಷೆ ನಡೆಸಿದ ಡಾ.ಪವನ್‌ಚಂದ್ರ ಶೆಟ್ಟಿ ನ್ಯಾಯಾಲಯದಲ್ಲಿ ವಿವರವಾದ ಸಾಕ್ಷಿ ಹೇಳಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.