ಮಂಗಳೂರು: ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ
ಮಂಗಳೂರು, ಮಾ.2: ಆರ್‌ಐಡಿಎಫ್-22ರಡಿ ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಮಂಗಳೂರು ನಗರದ ಕೊಡಿಯಾಲ್ ಬೈಲ್‌ನ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಜರುಗಿದ್ದು, ನಗರಾಭಿವೃದ್ಧಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿತು.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಮಂಗಳೂರು ನಗರದ ಹೃದಯಭಾಗದಲ್ಲಿ 2.10 ಕೋಟಿ ರೂ.ದಲ್ಲಿ ಪಾಲಿಕ್ಲಿನಿಕ್ (ಪಶು ಆಸ್ಪತ್ರೆ) ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಅತ್ಯುನ್ನತ ಚಿಕಿತ್ಸೆ ದೊರೆಯಲು ಸಹಕಾರಿಯಾಗಲಿದೆ. ಈ ಪಾಲಿಕ್ಲಿನಿಕ್‌ನಲ್ಲಿ ಜಾನುವಾರುಗಳಿಗೆ ಎಕ್ಸ್‌ರೇ ಮತ್ತು ಸ್ಕ್ಯಾನಿಂಗ್ ಸೌಲಭ್ಯವಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲಕರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ.ವೇದವ್ಯಾಸ್ ಕಾಮತ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ ಕೆ., ಯು.ಪಿ. ಇಬ್ರಾಹಿಂ, ಪ್ರಕಾಶ್ ಬಿ ಸಾಲಿಯಾನ್ ಹಾಗೂ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ದೇವದಾಸ್, ಡಾ.ಎಸ್.ಮೋಹನ್, ಡಾ.ರಘುರಾಮ ಭಟ್, ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.