ಭಟ್ಕಳ: ಬೈಲೂರು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ವಿಫಲ
ಭಟ್ಕಳ, ಮಾ. 2: ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ನಾಯ್ಕರ ವಿರುದ್ಧ ಅವಿಶ್ವಾಸ ನಿರ್ಣಯ ವಿಫಲವಾಗಿದ್ದು, ಮತ್ತೆ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಉಪಸ್ಥಿತಿಯಲ್ಲಿ ಕರೆಯಲಾಗಿದ್ದ ಅವಿಶ್ವಾಸ ಮಂಡನೆಯ ಸಭೆಯಲ್ಲಿ ಅಧ್ಯಕ್ಷ ಮಂಜುನಾಥ ನಾಯ್ಕ ಮಾತ್ರ ಹಾಜರಾಗಿದ್ದು, ಉಳಿದ ಸದಸ್ಯರು ಗೈರಾಗಿದ್ದರು. ಮಂಜುನಾಥ ನಾಯ್ಕರ ವಿರುದ್ಧ ಅವಿಶ್ವಾಸ ಮಂಡನೆಗಾಗಿ 10 ಮಂದಿ ಸದಸ್ಯರು ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಸದಸ್ಯರು ಗೈರಾಗಿದ್ದರಿಂದ ವಿಫಲವಾದಂತಾಗಿದೆ. ಮಂಜುನಾಥ ನಾಯ್ಕರು ಈ ಹಿಂದೆ ತಮ್ಮ ವಿರುದ್ಧ ಎರಡು ಬಾರಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮಂದಾದಾಗ ಹೈಕೋರ್ಟ ಮೆಟ್ಟಿಲೇರಿ ಗೆಲುವು ಸಾಧಿಸಿದ್ದರು. ಅಧ್ಯಕ್ಷ ಮಂಜುನಾಥ ನಾಯ್ಕರ ಬೆಂಬಲಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಮತ್ತು ಹೊನ್ನಾವರ ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ ನಿಂತಿದ್ದರಿಂದಲೇ ಅವಿಶ್ವಾಸ ನಿರ್ಣಯ ವಿಫಲವಾಗಲು ಕಾರಣ ಎನ್ನಲಾಗಿದೆ.